ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ, ಸಿನಿಮಾ ನಟ ಹಾಗೂ ದಲಿತರ ಅಸ್ಮಿತೆ ಕೆ.ಶಿವರಾಂ ನಿಧನರಾಗಿದ್ದಾರೆ. ಕಳೆದ 20 ದಿನಗಳಿಂದ ಅನರೋಗ್ಯ ಪೀಡಿತರಾಗಿದ್ದ ಅವರು ಇಂದು ಸಂಜೆ 4.30ರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರಿಗೆ 70 ವರ್ಷ ವಯಸ್ಸಾಗಿತ್ತು.
ಕನ್ನಡದಲ್ಲಿ IAS ಪರೀಕ್ಷೆ ಬರೆದು ಪಾಸಾದ ದೇಶದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಿವರಾಂ ಅವರು, IAS ಅಧಿಕಾರಿಯಾಗಿ ಕನ್ನಡ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸುವ ಮೂಲಕ 90ರ ದಶಕದಲ್ಲಿ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು.
ಕನ್ನಡ ಚಿತ್ರರಂಗಕ್ಕೆ ” ಬಾ ನಲ್ಲೇ ಮದುಚಂದ್ರಿಕೆ ” ಅಂತಹ ಸದಾಭಿರುಚಿ ಸಿನಿಮಾವನ್ನು ನೀಡುವ ಮೂಲಕ ಸೆಲೆಬ್ರಿಟಿಯ ಮಟ್ಟಕ್ಕೆ ಏರಿದ್ದ ಇವರು, ಸರಕಾರಿ ಅಧಿಕಾರಿಯಾಗಿ ನಿಭಾಯಿಸಿದ ಕರ್ತವ್ಯ ಜನರ ಗಮನ ಸೆಳೆದಿತ್ತು. ರಾಜ್ಯದ ದಕ್ಷ ಅಧಿಕಾರಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಆ ಕಾಲಕ್ಕೆ ಶಿವರಾಂ ಅವರ ಜನಪ್ರಿಯತೆ ಕಂಡು ದಲಿತ ರಾಜಕಾರಣಿಗಳೇ ಬೆಚ್ಚಿಬೀಳುತ್ತಿದ್ದರು.
ಸದಾ ಕಾಲ ದಲಿತರ ಏಳಿಗೆಗೆ ದುಡಿಯುತ್ತಿದ್ದ ಕೆ.ಶಿವರಾಂ, ತಾವು ಜವಾಬ್ದಾರಿ ಹೊತ್ತ ಇಲ್ಲ ಇಲಾಖೆಗಳಿಗೆ ನ್ಯಾಯ ಒದಗಿಸಿದ್ದರು.
90ರ ದಶಕದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಕೆ.ಶಿವರಾಂ, ಅಶೋಕಾಪುರಂ, ಗಾಂಧಿನಗರ, ಕೈಲಾಸಪುರಂ, ಜಯನಗರ, ಪೌರ ಕಾರ್ಮಿಕರ ಕಾಲೋನಿಗಳಲ್ಲಿ ನಿರಾಶ್ರಿತರಿಗೆ ಮನೆಗಳ ನಿರ್ಮಾಣ, ರಾಮ ಮಂದಿರ, ಗರಡಿ ಮನೆಗಳ ಜೀರ್ಣೋದ್ಧಾರ, ಯುವಕರಿಗೆ ಕ್ರೀಡಾ ಪ್ರೋತ್ಸಾಹ, ಗಾಯಕರಿಗೆ ಉತ್ತೇಜನ ನೀಡಿದ್ದರು. ಮೈಸೂರಿನ ಕೆಲ ಬಡಾವಣೆ ಮತ್ತು ಕಾಲೋನಿಗಳಿಗೆ ಕೆ.ಶಿವರಾಂ ಹೆಸರನ್ನು ನಾಮಕರಣ ಮಾಡಲಾಗಿದೆ.
ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ” ಛಲವಾದಿ ಮಹಾಸಭೆ ” ಸಂಘಟನೆಯನ್ನು ಕಟ್ಟಿ ದಲಿತರ ಹಕ್ಕೊತ್ತಾಯಗಳಿಗೆ ಧ್ವನಿಯಾಗಿದ್ದರು. ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿರಿಸಿದ್ದ ಕೆ.ಶಿವರಾಂ ಅವರ ಯೋಗ್ಯತೆಗೆ ತಕ್ಕ ಸ್ಥಾನಮಾನ ದೊರಕದೆ ಹೋದದ್ದು ಮಾತ್ರ ದುರದೃಷ್ಟಕರ. ಇವರ ನಿಧನದಿಂದ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ನಿಧನಕ್ಕೆ ಪ್ರಜಾಭಾರತ ಮೀಡಿಯಾ ಹೌಸ್ ಬಳಗ ತೀರ್ವ ಸಂತಾಪ ಸೂಚಿಸುತ್ತದೆ.