ನಗರದ ವಿವಿಧ ಬಡಾವಣೆ, ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ : ರಸ್ತೆಗಳ ಅಭಿವೃದ್ದಿ ಪರಿಶೀಲನೆ

ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರು ಇಂದು ಬೆಳಿಗ್ಗೆ ನಗರದ ವಿವಿಧ ಬಡಾವಣೆ, ಉದ್ಯಾನವನ ಹಾಗೂ ವರ್ತುಲ ರಸ್ತೆಯ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

22ನೇ ವಾರ್ಡಿನಲ್ಲಿರುವ ಲೋಕೋಪಯೋಗಿ ಇಲಾಖೆಯ ಶಿಥಿಲಗೊಂಡಿರುವ ವಸತಿಗೃಹ ಸ್ಥಳಕ್ಕೆ ತೆರಳಿ ವೀಕ್ಷಿಸಿದರು. ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಾಂತಮ್ಮ ಅವರು ಸದರಿ ಜಾಗದಲ್ಲಿಯೇ ಲೋಕೋಪಯೋಗಿ ಇಲಾಖೆಯ ನೌಕರರಿಗಾಗಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಯೋಜನೆ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ವಿವರ ನೀಡಿದರು. 

ಗಾಳಿಪುರ, ಸತ್ತಿ ರಸ್ತೆ, ನ್ಯಾಯಾಲಯ ರಸ್ತೆ, ವರ್ತುಲ ರಸ್ತೆ, ಇನ್ನಿತರ ರಸ್ತೆಗಳನ್ನು ವೀಕ್ಷಿಸಿದರು. ಬೈಪಾಸ್ ರಸ್ತೆಯಲ್ಲಿ ಡಿವೈಡರ್‍ಗಳನ್ನು ಸಮರ್ಪಕವಾಗಿ ನಿರ್ಮಣ ಮಾಡಬೇಕು. ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಅಪಘಾತ ಸಂಭವನೀಯ ಸ್ಥಳಗಳಲ್ಲಿ ಕೂಡಲೇ ಮುನ್ನೆಚ್ಚರಿಕೆ ಕಾರ್ಯಗಳನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಪುಟ್ಟಮಣಿ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಅಮೃತ್ ಯೋಜನೆಯಡಿ ಈ ಉದ್ಯಾನವನವು ಸೇರಿದಂತೆ ಇನ್ನಿತರ ಉದ್ಯಾನವನ ಅಭಿವೃದ್ದಿ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದರು. 

ರಸ್ತೆ, ಬಡಾವಣೆಗಳಲ್ಲಿ ಸ್ವಚ್ಚತೆ ಇರಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಫಲವಾದ ಕೊಳವೆಬಾವಿಗಳಿಗೆ ಪರ್ಯಾಯವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲಿಸಬೇಕು. ಜನರಿಗೆ ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೆಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು. 

ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ನಗರಸಭಾ ಆಯುಕ್ತರಾದ ಪರಶುರಾಮ ಛಲವಾದಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್, ಪರಿಸರ ಎಂಜಿನಿಯರ ಎಲ್. ರೂಪಾ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜು, ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *