ಜಾನುವಾರುಗಳ ಮರಣಕ್ಕೆ ರೋಗೋದ್ರೇಕ ಕಾರಣವಲ್ಲ : ಜಿಲ್ಲಾಧಿಕಾರಿ ಶ್ರೀರೂಪ ಸ್ಪಷ್ಟನೆ

ಚಾಮರಾಜನಗರ: ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದ 5 ದನಗಳು ವಿಷಯುಕ್ತ ನೀರು ಸೇವಿಸಿ ಮರಣಹೊಂದಿದೆ. ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದ್ದಾರೆ.

ಫೆಬ್ರವರಿ 4 ರಂದು ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಅವರ 6 ದನಗಳು (ಹಳ್ಳಿಕಾರ್) ಹಾಗೂ ಫೆಬ್ರವರಿ 5 ರಂದು ಗುನ್ನೂರು ಬಯಲು ಪಳನಿಮೇಡು ಗ್ರಾಮದ ತಂಗರಾಜು ಅವರ 5 ದನಗಳು (ಸ್ಥಳೀಯ) ಮೇಯಲು ಹೋಗಿದ್ದ ಸಂದರ್ಭದಲ್ಲಿ ಹಠಾತ್ ಆಗಿ ಒಟ್ಟು 11 ಜಾನುವಾರುಗಳು ಮೃತಪಟ್ಟಿವೆ. 

ಸದರಿ ದನಗಳ ಮರೋಣೋತ್ತರ ಪರೀಕ್ಷೆಯನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (ಐಎಎಚ್ ಮತ್ತು ವಿಬಿ, ಬೆಂಗಳೂರು) ತಜ್ಞ ವಿಜ್ಞಾನಿಗಳ ತಂಡವು ನಡೆಸಿದ್ದು, ವಿಷಯುಕ್ತ ನೀರು ಸೇವಿಸಿರುವುದರಿಂದ ಜಾನುವಾರುಗಳು ಮರಣ ಹೊಂದಿರುತ್ತದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿರುತ್ತದೆ. 

ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *