174 ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ: ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು – ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು 174 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರಗಳನ್ನು ಶಾಸಕ ಹಾಗೂ ಎಂಎಸ್‍ಎಲ್‍ಐನ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ವಿತರಣೆ ಮಾಡಿದರು.

ಮಂಗಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಡಿಜಿಟಲ್ ಗ್ರಂಥಾಲಯ ಹಾಗೂ ಕೂಸಿನ ಮನೆ ಹಾಗೂ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವ ವಸತಿ ಯೋಜನೆಯಡಿ 151, ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 23 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರಗಳನ್ನು ಪಡೆದ ಫಲಾನುಭವಿಗಳ ಇಂದಿನಿಂದಲೇ ಕಾಮಗಾರಿ ಪ್ರಾರಂಭಮಾಡಿ 90 ದಿನಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಯೋಜನೆಯ ಸೌಲಭ್ಯವನ್ನು ಪಡೆಯಲಾಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ಮುತುವರ್ಜಿ ವಹಿಸಿ ಮನೆ ನಿರ್ಮಿಸಿಕೊಳ್ಳಿ. ಉತ್ತಮ ಜೀವನ ನಡೆಸಿ, ಆರ್ಥಿಕವಾಗಿ ಸಬಲರಾಗಿ ಎಂದರು.

ಈಗಾಗಲೇ ಕ್ಷೇತ್ರದಾದ್ಯಂತ ಅತಿ ಹೆಚ್ಚು ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳುವ ಮೂಲಕ ನಿಗಧಿತ ಅವಧಿಯೊಳಗೆ ಕಾಮಗಾರಿ ಮುಗಿಸಿಕೊಳ್ಳುವ ಮೂಲಕ ಇತರರಿಗೂ ಆದರ್ಶರಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಂಥಾಲಯ ಉದ್ಘಾಟನೆ : ಇದೇ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ಗ್ರಂಥಾಲಯವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಪ್ರತಿಯೊಂದು ಗ್ರಾಮಗಳಿಗೂ ಸಹ ಒಂದೊಂದು ಗ್ರಂಥಾಲಯವನ್ನು ಸ್ಥಾಪಿಸಬೇಕು. ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಇಡುವ ಮೂಲಕ ದೊಡ್ಡ ಗ್ರಂಥಬಂಡಾರವನ್ನೇ ಸೃಷ್ಟಿಸಬೇಕು. ಕಲೆ, ಸಾಹಿತ್ಯ, ಸಾಂಸ್ಕøತಿ, ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಎಲ್ಲಾ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಲಭಿಸುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕೂಸಿನ ಮನೆ ಉದ್ಘಾಟನೆ: ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೂರು ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಕೂಸಿನ ಮನೆಗೆ ಬಿಟ್ಟು ತಮ್ಮ ಕೆಲಸಗಳಿಗೆ ತೆರಳಲು ಅವಕಾಶವಿದೆ. ಇಲ್ಲಿ ನುರಿತ ತರಬೇತುದಾರರನ್ನು ನೇಮಿಸಲಾಗಿದ್ದು, ನಿಮ್ಮ ಮಕ್ಕಳನ್ನು ಹಾರೈಕೆ ಮಾಡಲಿದ್ದಾರೆ. ಕಾರ್ಮಿಕರು ತಮ್ಮ ಕೆಲಸ ಮುಗಿದ ನಂತರ ತಮ್ಮ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗಬಹುದು ಎಂದರು.

ಮಕ್ಕಳಿಗೆ ಎಲ್ಲಾ ರೀತಿಯ ಪೌಷ್ಠಿಕಾಂಶಯುಕ್ತ ಆಹಾರ, ಆಟಿಕೆಗಳು ಸಹ ಇರಲಿದೆ. ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಚಾಮರಾಜನಗರ ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು, ಇಲ್ಲಿ ಕುಡಿಯುವ ನೀರಿಗೆ ಹಾಗೂ, ದನಕರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಎಂದ ಅವರು, ಅವಶ್ಯಕತೆ ಇದ್ದಲ್ಲಿ, ಗೂ ಶಾಲೆಯನ್ನು ಸಹ ತೆರೆಯಲಾಗುವುದು ಎಂದು ಹೇಳಿದರು.

ಗ್ರಾಮಕ್ಕೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದ್ದು, ಮಂಗಲದಿಂದ ಮಂಗಲ ಹೊಸೂರು ಮಾರ್ಗವಾಗಿ ಸಿಂಗನಪುರಕ್ಕೆ ತೆರಳುವ ರಸ್ತೆಯನ್ನು ಸದ್ಯದಲ್ಲಿಯೇ ವಿಶೇಷ ಅನುದಾನ ನೀಡಿ, ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಇನ್ನೆರಡು ಮೂರು ವರ್ಷಗಳಲ್ಲಿ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಅಪ್ಪಣ್ಣಸ್ವಾಮಿ, ಸದಸ್ಯರಾದ ಸುರೇಶ್, ಚಿನ್ನತಾಯಮ್ಮ, ಸುಧಾ ಜಿ., ಮಹದೇವಮ್ಮ, ಶಿವಮ್ಮ, ವೈ.ಸಿ.ಮಹದೇವಸ್ವಾಮಿ, ಮಹದೇವಯ್ಯ, ಶಶಿಧರ್, ಮಂಜು, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಣ್ಣ, ಮುಖಂಡರಾದ ನಾರಾಯಣಸ್ವಾಮಿ, ರವಿ, ಮಹದೇವಸ್ವಾಮಿ, ಪಿಡಿಓ ಆದಿಶೇಷಮೂರ್ತಿ, ಕಾರ್ಯದರ್ಶಿ ನಾಗರಾಜು, ಲೆಕ್ಕ ಸಹಾಯಕ ಮಲ್ಲೇಶ್, ಗ್ರಾ.ಪಂ. ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *