ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ಮೊದಲ ಹಂತವಾಗಿ ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್ ಗೆ ಚಾಲನೆ.

ಜಿಲ್ಲೆಯ ಆಸಕ್ತ ಮೈಕ್ರೋ ಉದ್ಯಮಿಗಳಿಗೆ ಉದ್ಯಮಾಭಿವೃದ್ಧಿ, ಮಾರುಕಟ್ಟೆ ಸಂಶೋಧನೆ, ಉದ್ದಿಮೆ ನೋಂದಣಿ, ಉದ್ಯಮ ವಿಸ್ತರಣೆ, ಮುಂದಿನ ಪೀಳಿಗೆಗೆ ಉದ್ಯಮಿಗಳ ತಯಾರಿ ಹಾಗೂ ಇತರೆ ಹಲವು ಕ್ಷೇತ್ರಗಳಲ್ಲಿ ಸಾಮರ್ಥ್ಯ ನಿರ್ಮಾಣ ಮಾಡುವ ಗುರಿಯೊಂದಿಗೆ ಜಿಲ್ಲಾಡಳಿತ ಹಮ್ಮಿಕೊಂಡಿರುವ ಮಹತ್ತರ ಯೋಜನೆಯ ಮೊದಲ ಹಂತವಾಗಿ ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ನಗರದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ. ಸಭಾಂಗಣದಲ್ಲಿ ಬುಧವಾರ (ನ.5) ಜಿಲ್ಲಾಡಳಿತ ಮತ್ತು ಸಿ.ಐ.ಐ (ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ) ಸೆಂಟರ್ ಆಫ್ ಎಕ್ಸಲೆನ್ಸ್ ಆನ್ ಎಂಪ್ಲಾಯ್‍ಮೆಂಟ್ ಮತ್ತು ಲೈವ್‍ಲಿಹುಡ್ (ಸಿ.ಇ.ಎಲ್) ಸಂಯುಕ್ತಾಶ್ರಯದಲ್ಲಿ ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಣ್ಣ ಉದ್ದಿಮೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಉದ್ಯಮ ಆಸಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಮರಾಜನಗರ ಜಿಲ್ಲೆಯು ನೈಸರ್ಗಿಕ ಸಂಪತ್ತು, ಅಗತ್ಯ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೊಂದಿದೆ. ಆರೋಗ್ಯ, ಪೌಷ್ಠಿಕತೆ, ಶಿಕ್ಷಣ ಮತ್ತು ಆರ್ಥಿಕತೆಯನ್ನು ಕೇಂದ್ರವಾಗಿಸಿಕೊಂಡು ಚಾಮರಾಜನಗರವನ್ನು ಅಭಿವೃದ್ದಿ ಜಿಲ್ಲೆಯನ್ನಾಗಿ ರೂಪಿಸುವ ಗುರಿ ಜಿಲ್ಲಾಡಳಿತದ್ದಾಗಿದೆ ಎಂದು ಹೇಳಿದರು.
ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಯೋಜನೆಯ ಮೂಲಕ ಸಿ.ಐ.ಐ-ಸಿ.ಇ.ಎಲ್ ಜೊತೆಗೂಡಿ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಾಮರ್ಥ್ಯಭಿವಧ್ದಿಗೆ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಮೈಸೂರಿನ ಸಿ.ಐ.ಐ ಅಧ್ಯಕ್ಷರಾದ ನಾಗರಾಜ ಗರ್ಗೇಶ್ವರಿ ಅವರು ಮಾತನಾಡಿ ಚಾಮರಾಜನಗರದಲ್ಲಿ ಉದ್ಯಮ ಕ್ಷೇತ್ರದ ಅವಕಾಶಗಳು ಹೆಚ್ಚುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ಮಾರಾಟ ಮತ್ತು ಉದ್ಯಮ ನಿರ್ವಹಣೆಯಲ್ಲಿ ಉದ್ಯಮಿಗಳು ತಮ್ಮ ಕೌಶಲ್ಯಗಳನ್ನು ಬಲಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸರ್ಕಾರದ ವಿವಿಧ ಉದ್ಯಮ ಸಹಾಯ ಯೋಜನೆಗಳು, ಹಣಕಾಸು, ತೆರಿಗೆ, ಜಿಎಸ್.ಟಿ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿ.ಐ.ಐ-ಸಿ.ಇ.ಎಲ್ ಪ್ರಮುಖ ಪಾತ್ರವಹಿಸಲಿದೆ. ಉದ್ಯಮಿಗಳ ಅಭಿವೃದ್ಧಿ ವೇದಿಕೆಗೆ ಉದ್ಯಮಿಗಳು ಸೇರ್ಪಡೆಯಾಗಬೇಕೆಂದು ನಾಗರಾಜ ಗರ್ಗೇಶ್ವರಿ ಅವರು ಕರೆ ನೀಡಿದರು.
ಸಿ.ಐ.ಐ ಕರ್ನಾಟಕ ಎಂ.ಎಸ್.ಎಂ.ಇ ಪ್ಯಾನೆಲ್ ನ ಸದಸ್ಯ ಕಾರ್ಯದರ್ಶಿಗಳಾದ ಸ್ಯಾಮ್ ಚೆರಿಯನ್ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆಯ ಪ್ರಗತಿಪರ ಆಡಳಿತ ಮತ್ತು ಕ್ಷಿಪ್ರ ಅಭಿವೃದ್ಧಿಯ ಪ್ರಯತ್ನಗಳಂತಹ ಕ್ರಮಗಳು ಹೆಚ್ಚಿನ ಕೈಗಾರಿಕೆಗಳನ್ನು ಜಿಲ್ಲೆಗೆ ಆಕರ್ಷಿಸುತ್ತವೆ ಎಂದರು.
ಕಾರ್ಯಕ್ರಮದ ವೇಳೆ ಚಾಮರಾಜನಗರ ಜಿಲ್ಲಾಡಳಿತ ಮತ್ತು ಸಿ.ಐ.ಐ-ಸಿ.ಇ.ಎಲ್ ನಡುವಿನ ಬಿಸಿನೆಸ್ 360 ಉದ್ಯಮಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಈ ಯೋಜನೆಯಡಿ ಜಿಲ್ಲೆಯ ಮೊದಲ 200 ಉದ್ಯಮಿಗಳಿಗೆ ತರಬೇತಿ ನೀಡಲಾಗುತ್ತದೆ.
ನಾಗರಾಜ ಗರ್ಗೇಶ್ವರಿ ಅವರು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ಸಿ.ಎಸ್.ಆರ್ ಸಹಯೋಗ ಪತ್ರವನ್ನು ಸಲ್ಲಿಸಿದರು. ಯೋಜನೆಯಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಂಟರಾಕ್ಟಿವ್ ಲರ್ನಿಂಗ್ ಉಪಕರಣಗಳ ಸ್ಥಾಪನೆ, ಮಹಿಳೆಯರ ಆರೋಗ್ಯ ಸ್ವಚ್ಛತೆಗಾಗಿ ಪಿಂಕ್ ಶೌಚಾಲಯ ನಿರ್ಮಾಣ ಕೈಗೊಳ್ಳಲಾಗುತ್ತದೆ. ಈ ಸಂಬಂಧ 1.06 ರೂ ಕೋಟಿ ಮೊತ್ತದ ಯೋಜನೆಗಳಿಗೆ ಸಿಎಸ್‍ಆರ್ ಸಹಯೋಗಕ್ಕಾಗಿ ಜಿಲ್ಲಾಧಿಕಾರಿಗಳಿಗೆ 1.06 ಕೋಟಿ ಮೌಲ್ಯದ ಕೊಡುಗೆ ಬದ್ಧತೆಯ ಪತ್ರವನ್ನು ಸಲ್ಲಿಸಲಾಯಿತು.
ಯೋಜನೆಯು ರೋಟರಿ ಸಹಭಾಗಿತ್ವದಲ್ಲಿ ಸಿ.ಎಸ್.ಆರ್ ಅಧ್ಯಕ್ಷರಾದ ಕಿರಣ್ ರಾಬರ್ಟ್ ಹಾಗೂ ಸಿ.ಐ.ಐ ಕರ್ನಾಟಕ ರಾಜ್ಯ ಪರಿಷತ್‍ನ ಷಡಾಕ್ಷರಿ ಸ್ವಾಮಿ ಅವರ ಉಪಸ್ಥಿತಿಯಲ್ಲಿ ಜಾರಿಗೆ ಬರಲಿದೆ.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕರಾದ ದೊರೈರಾಜ್, ಸಹಾಯಕ ನಿರ್ದೇಶಕರಾದ ವಿಜಯ್ ಕುಮಾರ್, ಸಿ.ಐ.ಐ-ಸಿ.ಇ.ಎಲ್‍ನ ಶಿವೇಕ ಗುರುಬರಣ್, ಜಿಲ್ಲಾ ಸಿ.ಎಸ್.ಆರ್ ಸಮಾಲೋಚಕರಾದ ರಕ್ಷಿತಾ, ಜಿಲ್ಲಾ ಇ-ಆಡಳಿತ ಸಮಾಲೋಚಕರಾದ ಮಧುಕೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.