ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನವನ್ನು ವಾರ್ತಾ ಇಲಾಖೆ ಸುಪರ್ದಿಗೆ ಪಡೆಯಲು ಸೂಚನೆ ನೀಡಿದ ಜಿಲ್ಲಾಡಳಿತ ಕ್ರಮದ ವಿರುದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಹಾಗೂ ರೈತ ಪರ, ಪ್ರಗತಿ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ನೋಟಿಸ್ ನೀಡಿದ ಅಧಿಕಾರಿ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ಮುಚ್ಚಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ನೀತಿ ಸಂಹಿತೆ ನೆಪದಲ್ಲಿ ಮಾಧ್ಯಮ ರಂಗದ ಮೇಲೆ ಜಿಲ್ಲಾಡಳಿತ ಗದಾ ಪ್ರಹಾರ ಮಾಡಲು ಮುಂದಾಗಿದೆ. ಚಾಮರಾಜನಗರ ಪತ್ರಿಕಾ ಭವನವನ್ನು ಮುಚ್ಚಿ ಸುಪರ್ದಿಗೆ ಪಡೆಯಲು ವಾರ್ತಾ ಇಲಾಖೆಗೆ ಸ್ವಿಪ್ ಮತ್ತು ಜಿಪಂ ಸಿಇಓ ಆನಂದ ಪ್ರಕಾಶ್ ಮೀನಾ ಸೂಚನೆ ನೀಡಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು, ಈ ಅಧಿಕಾರ ವಿರುದ್ದ ಕ್ರಮ ಕೈಗೊಳ್ಲಲು ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾ ಕಾರ್ಯಕರ್ತರ ನಿರತ ಪತ್ರಕರ್ತರ ಸಂಘದ ದೂರು ನೀಡಲು ಮುಂದಾಗಿದೆ.
ಭವನಕ್ಕೆ ನೋಟೀಸ್ ಜಾರಿ : ಪ್ರಾಮಾಣಿಕ ಪತ್ರಕರ್ತರ ಸ್ವಾಭಿಮಾನಕ್ಕೆ ಧಕ್ಕೆ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಪತ್ರಿಕಾಭವನದಲ್ಲಿ ನಡೆಯುವ ಸುದ್ದಿಗೋಷ್ಠಿಗಳು ರಾಜಕೀಯ ಚಟುವಟಿಕೆಗಳಂತೆ! ಸುದ್ದಿಗೋಷ್ಠಿ ನಡೆಸುವ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಆಮಿಷ ಒಡ್ಡುತ್ತಾರೆ ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಎಂದು ನೋಟೀಸ್ ನೀಡುವ ಮೂಲಕ ಜಿ.ಪಂ. ಸಿಇಓ ಪತ್ರಿಕಾಭವನದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತವೆ ಎಂದು ವೃಥಾ ಆರೋಪ ಮಾಡಿರುವುದು ಸರಿಯಲ್ಲ. ಪತ್ರಿಕಾಗೋಷ್ಠಿ ನಡೆಸಲು ಜಿಲ್ಲಾ ಚುನಾವಣಾಧಿಕಾರಿಯಿಂದ ಅನುಮತಿಪಡೆಯಬೇಕು, ಹಾಗು ಪತ್ರಿಕಾಭವನಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚನೆ ನೀಡಿರುವುದು ಪತ್ರಿಕಾ ರಂಗದ ಮೇಲೆ ಅಧಿಕಾರಿ ಶಾಹಿ ದಬ್ಬಾಳಿಕೆಯಾಗಿದೆ.
ಪತ್ರಿಕಾ ಭವನದ ಶಂಕುಸ್ಥಾಪನೆ ಹಾಗು ಉದ್ಘಾಟನಾ ನಾಮ ಫಲಕಗಳನ್ನು ಪೇಪರ್‍ನಿಂದ ಮುಚ್ಚಿದ ಚುನಾವಣಾಧಿಕಾರಿಗಳು: ಜಿಲ್ಲಾ ಚುನಾವಣಾಧಿಕಾರಿಗಳ ಕ್ರಮಕ್ಕೆ ರೈತ ಸಂಘ , ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಗತಿ ಪರ ಸಂಘಟನೆಗಳ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಮುಖಂಡರ ಭೇಟಿ ನಡೆಯುವಂತಿಲ್ಲ. ಆದರೂ ಸಹ ಚಾಮರಾಜನಗರದ ಪತ್ರಕರ್ತರ ಭವನದಲ್ಲಿ ನಿತ್ಯವೂ ರಾಜಕೀಯ ವ್ಯಕ್ತಿಗಳು ಸುದ್ದಿಗೋಷ್ಠಿ, ಸಂವಾದ ನಡೆಸುವ ಮೂಲಕ ಪತ್ರಕರ್ತರಿಗೆ ಆಮಿಷ ಒಡ್ಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುವಂತಿದೆ. ಹಾಗಾಗಿ ಪತ್ರಕರ್ತರ ಭವನವನ್ನು ಮುಚ್ಚಿ ವಾರ್ತಾ ಇಲಾಖೆಯ ಸುಪರ್ದಿಗೆ ಪಡೆಯಬೇಕು” ಎಂದು ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿಯಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾರ್ತಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರ್ಕಾರ ಮಾಡಿರುವ ದಾಳಿ. ಇಂಥದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರೂ ಖಂಡಿಸಬೇಕಾಗಿದೆ.