ನೆಟ್‍ಬಾಲ್ ಅಸೋಸಿಯೇಷನ್‍ನ ಪೂರ್ವಭಾವಿ ಸಭೆಯಲ್ಲಿ ಗೌರವಾಧ್ಯಕ್ಷೆ ನರ್ಗೀಸ್‍ಬಾನು
ಚಾಮರಾಜನಗರ.ಫೆ.15: ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್ ಕಾರ್ಗಲ್ ಜಿಲ್ಲೆಯ ಬೋರವ ಜವಾಹರ್‍ಲಾಲ್ ನೆಹರೂ ಇನ್‍ಸ್ಟಿಟ್ಯೂಟ್‍ನಲ್ಲಿ ನಡೆದ 36ನೇ ಜೂನಿಯರ್ ರಾಷ್ಟ್ರೀಯ ನೆಟ್‍ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದ ನಮ್ಮ ಜಿಲ್ಲೆಯ ಕ್ರೀಡಾಪಟುಗಳಿಗೆ ಶೀಘ್ರದಲ್ಲೇ ಸನ್ಮಾನಿಸಲಾಗುವುದು ಎಂದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ಇಂದೋರ್ ಕಾರ್ಗಲ್ ಜಿಲ್ಲೆಯ ಬೋರವ ಜವಾಹರ್‍ಲಾಲ್ ನೆಹರೂ ಇನ್ಟಿಟ್ಯೂಟ್‍ನಲ್ಲಿ ಇತ್ತೀಚೆಗೆ ನಡೆದ 36ನೇ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್‍ನ ಬಾಲಕಿಯರ ವಿಭಾಗದಲ್ಲಿ 2ನೇ ರನ್ನರ್ ಅಪ್, ಮತ್ತು ಫಾಸ್ಟ್ 5 ಜೂನಿಯರ್ ಚಾಂಪಿಯನ್ ಶಿಪ್‍ನ ಬಾಲಕರ ವಿಭಾಗದಲ್ಲಿ 2ನೇ ರನ್ನರ್ ಅಪ್ ಪ್ರಶಸ್ತಿಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದುಕೊಂಡಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.

ಕರ್ನಾಟಕ ತಂಡದ ಬಾಲಕರು ಹಾಗೂ ಬಾಲಕಿಯರ 2 ವಿಭಾಗಗಳಿಂದ 7 ಕ್ರೀಡಾಪಟುಗಳು ನಮ್ಮ ಜಿಲ್ಲೆಯಿಂದ ಸ್ಪರ್ಧಿಸಿ, ಪ್ರಶಸ್ತಿ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶೀಘ್ರದಲ್ಲೇ ಒಂದು ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲೆಯಿಂದ ಪಾಲ್ಗೊಂಡಿದ್ದ ಎಲ್ಲಾ ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಲಾಗುವುದು ಎಂದರು.

ಶೀಘ್ರದಲ್ಲೇ ನೆಟ್‍ಬಾಲ್ ಸದಸ್ಯತ್ವದ ಅಭಿಯಾನವನ್ನು ಕೂಡಾ ಪ್ರಾರಂಭಿಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳನ್ನು ನೆಟ್‍ಬಾಲ್ ಅಸೋಸಿಯೇಷನ್ ನಿಯೋಗದೊಂದಿಗೆ ಭೇಟಿ ಮಾಡಿ ಕ್ರೀಡಾಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು ಎಂದರು.

ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಜಿಲ್ಲಾ ಕೇಂದ್ರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನೆಟ್‍ಬಾಲ್ ಕ್ರೀಡೆಯನ್ನು ಪ್ರಚೂರಪಡಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿರುವಂತಹ ಕ್ರೀಡಾಪಟುಗಳನ್ನು ಕ್ರೀಡಾಲೋಕಕ್ಕೆ ಪರಿಚಯಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್.ಬಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ನೆಟ್‍ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕಂಚಿನ ಪದಕ ಪಡೆದ ಜಿಲ್ಲೆಯ ಕ್ರೀಡಾಪಟುಗಳು ಸಾಧನೆಗೈದ ಹಿನ್ನೆಲೆಯಲ್ಲಿ ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷರು ಹಾಗೂ ಸದಸ್ಯರುಗಳ ವತಿಯಿಂದ ಗೌರವಾಧ್ಯಕ್ಷರಿಗೆ ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಮಧುಕುಮಾರ್, ಖಜಾಂಚಿ ಎಂ.ಸಿ.ಮಹದೇವಸ್ವಾಮಿ, ಸದಸ್ಯರಾದ ನಾಗೇಂದ್ರ ಸಿ., ರೂಪಾ.ಎಸ್., ಶ್ರೀಧರ್, ಶ್ರೀಕಂಠಸ್ವಾಮಿ(ಸಂತೋಷ್.ಎಸ್) ಇದ್ದರು.