ಚಾಮರಾಜನಗರ: ಜಿಲ್ಲೆಯಲ್ಲಿ ಜೀತ ವಿಮುಕ್ತರಿಗೆ ಸಾಮಾಜಿಕ ಭದ್ರತೆ, ಆಶ್ರಯ ಮನೆ, ಬಿಡುಗಡೆ ಪತ್ರ, ಪರಿಹಾರ ಸೌಲಭ್ಯ ವಿತರಣೆ ಸೇರಿದಂತೆ ಇನ್ನಿತರೆ ಸ್ಥಿತಿಗತಿ ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 253 ಜೀತ ವಿಮುಕ್ತರಿದ್ದು, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಜೀತ ವಿಮುಕ್ತರ ಪೈಕಿ ಕೆಲವರು ಮರಣ ಹೊಂದಿದ್ದು, ಉಳಿದವರಿಗೆ ಇನ್ನೂ ಗುರುತಿನ ಚೀಟಿ, ಬಿಡುಗಡೆ ಪತ್ರ ನೀಡಿರುವುದಿಲ್ಲ. ಜಮೀನು ನೀಡಲು ಗಡಿ ಗುರುತಿಸಿ ಹಸ್ತಾಂತರ ಮಾಡಬೇಕು. ಕಳೆದ ಸಭೆಯಲ್ಲಿ ಈ ಬಗ್ಗೆ ವಿಸ್ತøತವಾಗಿ ಚರ್ಚಿಸಿ ತುರ್ತಾಗಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಸ್ಥಳ ಲಭ್ಯವಿಲ್ಲದಿದ್ದರೆ ಉಪವಿಭಾಗಧಿಕಾರಿ ಹಂತದಲ್ಲಿ ದರ ನಿಗದಿಪಡಿಸಿ ಭೂ ಒಡೆತನದಡಿ ಜಮೀನು ಖರೀದಿಸಿ ಹಂಚಿಕೆ ಮಾಡಬೇಕು. ಜೀತವಿಮುಕ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ವಿಳಂಬ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜೀತವಿಮುಕ್ತರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಇದು ಮರುಕಳಿಸಬಾರದು. ಜಿಲ್ಲಾಮಟ್ಟದಲ್ಲಿ ನಡಾವಳಿ ತಯಾರಿಸಬೇಕು. ಜೀತವಿಮುಕ್ತರಿಗೆ ಮಂಜೂರಾಗಿರುವ ಜಮೀನುಗಳು ಬೇರೆ ವ್ಯಕ್ತಿಗಳ ಸ್ವಾಧೀನದಲ್ಲಿದ್ದರೆ ಅದನ್ನು ಒತ್ತುವರಿ ಅಥವಾ ತೆರವುಗೊಳಿಸುವ ಪ್ರಕ್ರಿಯೆ ಶೀಘ್ರವಾಗಿ ಆಗಬೇಕು. ಹಕ್ಕುಪತ್ರ ವಿತರಣೆ ಮಾಡಬೇಕು. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಭೂದಾಖಲೆ ಅಧಿಕಾರಿಗಳು ಒಂದು ವಾರದೊಳಗೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಜೀತವಿಮುಕ್ತರ ಸ್ಥಿತಿಗತಿ ವರದಿ ಸಲ್ಲಿಸಬೇಕು. ಅಲ್ಲದೆ ಅಕ್ಟೋಬರ್ 13ರಂದು ನಿಗಧಿಪಡಿಸಲಾಗಿರುವ ಮುಂದಿನ ಸಭೆಯೊಳಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜೀತವಿಮುಕ್ತರಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗುವಂತೆ ನಿರ್ದೇಶನ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆ ಕುರಿತು ಹಾಗೂ ಜನರಿಗೆ ಕಾನೂನು ಅರಿವು ಮೂಡಿಸಲು ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಮನ್ವಯದೊಂದಿಗೆ ಜಿಲ್ಲಾ, ತಾಲೂಕು ಹಾಗೂ ಹೋಬಳಿಮಟ್ಟದಲ್ಲಿ ಅರಿವು ಕಾರ್ಯಗಾರ ಏರ್ಪಡಿಸಬೇಕು. ಅಕ್ಟೋಬರ್ ಮಾಹೆಯಲ್ಲಿ ಜಿಲ್ಲಾಮಟ್ಟದ ಕಾರ್ಯಗಾರ ಆಯೋಜನೆಗೆ ಅವಶ್ಯ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಕಾರ್ಯಗಾರಕ್ಕೂ ಮೊದಲು ಪೂರ್ವಭಾವಿ ಸಭೆ ನಡೆಸಬೇಕು. ಅರಿವು ಕಾರ್ಯಗಾರಗಳ ಕ್ರೀಯಾಯೋಜನೆಯನ್ನು ತಕ್ಷಣವೇ ಜಾರಿಗೊಳಿಸಬೇಕು. ಆಯೋಜನೆಗೆ ಅಗತ್ಯ ಹೆಚ್ಚುವರಿ ಅನುದಾನಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ತಿಳಿಸಿದರು.
ಸುಳ್ವಾಡಿ ವಿಷಪ್ರಾಶನ ದುರಂತದ ಸಂತ್ರಸ್ತರಿಗೆ ಕ್ರಮಬದ್ಧವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳನ್ನು ತಪ್ಪದೇ ಆಯೋಜಿಸಿ ಸ್ಕ್ರೀನಿಂಗ್ ಮಾಡಬೇಕು. ವಿಷಪ್ರಾಶನದಿಂದ ಯಾವುದೇ ಅಡ್ಡಪರಿಣಾಮಗಳು ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ಜೂನ್ ಮಾಹೆಯಿಂದ ಸಂತ್ರಸ್ಥರಿಗೆ ಪೌಷ್ಠಿಕ ಆಹಾರ (ನ್ಯೂಟ್ರಿಷೀಯನ್ ಫುಡ್) ವಿತರಣೆಯಾಗದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಸಂತ್ರಸ್ಥರಿಗೆ ಡಿ.ಎಂ.ಎಫ್ ನಿಧಿಯಿಂದ ಪೌಷ್ಠಿಕ ಆಹಾರ ನೀಡಲಾಗುತ್ತಿದ್ದು, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ವಿತರಣೆ ವಿಳಂಬಕ್ಕೆ ಯಾವುದೇ ಸಬೂಬು ಹೇಳದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆಯಲು ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಹಕಾರ ಪಡೆಯಬೇಕು. ಸಮಿತಿ ಸದಸ್ಯರಿಂದ ಗ್ರಾಮಗಳ ತಳಮಟ್ಟದ ಸಮಸ್ಯೆಗಳ ಅರಿವಾಗಲಿದೆ. ಈ ಬಗ್ಗೆ ಸಭೆಯಲ್ಲಿ ಸದಸ್ಯರು ಮನವರಿಕೆ ಮಾಡುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸದಸ್ಯರೊಂದಿಗೆ ಎಲ್ಲಾ ತಾಲೂಕು ತಹಶೀಲ್ದಾರರು, ಅಧಿಕಾರಿಗಳು ಸಂಪರ್ಕ ಸಾಧಿಸುವುದು ಅವಶ್ಯವಾಗಿದೆ ಎಂದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಕೋವಿಡ್ ಸಂತ್ರಸ್ಥರಿಗೆ ಉದ್ಯೋಗ ನೀಡುವ ಸಂಬಂಧ ಕೆಲ ಸಂತ್ರಸ್ಥರು ಎಸ್.ಎಸ್.ಎಲ್.ಸಿ ಉತ್ತೀರ್ಣವಾಗದಿರುವುದು ಕಂಡುಬಂದಿದ್ದು, ಇವರಿಗೆ ಅಗತ್ಯ ತರಬೇತಿ ನೀಡಿ ಉತ್ತೀರ್ಣಗೊಳಿಸಲು ಮುಂದಾಗುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆಗಾಗಿ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನೂತನ ಸದಸ್ಯರು ದೌರ್ಜನ್ಯ ಪ್ರಕರಣಗಳು ತಾಲೂಕುವಾರು ಎಷ್ಟು ಪ್ರಕರಣಗಳು ದಾಖಲಾಗಿವೆ. ಯಾವ ಹಂತದಲ್ಲಿವೆ. ಪರಿಹಾರ ದೊರಕಿದೆಯೇ, ಇಲ್ಲವೇ, ಎಂಬುದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಪರಿಶಿಷ್ಟ ಜನಾಂಗದವರಿಗೆ ನ್ಯಾಯ ದೊರಕಿಸಲು ಮುಂದಾಗಬೇಕು ಎಂದರು.
ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅರಕಲವಾಡಿ ನಾಗೇಂದ್ರ, ರಮೇಶ್ ಪ್ರಭು, ವೃಷಬೇಂದ್ರ, ನಟರಾಜು ಮಾಳಿಗೆ, ಸಿದ್ದರಾಜು, ಕೇತಮ್ಮ, ರಜನಿ ಕೆ. ತಿವಾರಿ, ಅರ್ಪಿತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಎಲ್ಲಾ ತಾಲೂಕು ತಹಶೀಲ್ದಾರರು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.