ಚಾಮರಾಜನಗರ: ಮಳೆ ನೀರಿನ ಸದ್ಭಳಕೆಯಿಂದ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಗ್ರಾಮಪಂಚಾಯಿತಿ ಕಟ್ಟಡಗಳು ಮಳೆನೀರು ಕೊಯ್ಲು ರಚನೆಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ಜಲಶಕ್ತಿ ಅಭಿಯಾನದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ‘ಜಲ ಶಕ್ತಿ ಯೋಜನೆ - ನಾರಿ ಶಕ್ತಿ ಸೇ ಜಲ ಶಕ್ತಿ’ ಅಭಿಯಾನ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ನೀರನ್ನು ಸಂಗ್ರಹಿಸುವ ಮೂಲಕ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು, ನೀರನ್ನು ಮಿತವಾಗಿ ಬಳಸುವುದು. ಪ್ರಮುಖವಾಗಿ ಮಹಿಳೆಯರಿಗೆ ಐ.ಇ.ಸಿ ಕಾರ್ಯಕ್ರಮಗಳ ಮೂಲಕ ನೀರಿನ ಸಂರಕ್ಷಣೆಯ ಅರಿವು ಮೂಡಿಸುವುದು ಜಲ ಶಕ್ತಿ ಯೋಜನೆ - ನಾರಿ ಶಕ್ತಿ ಸೇ ಜಲ ಶಕ್ತಿ ಅಭಿಯಾನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮುಂದಿನ 2 ತಿಂಗಳೊಳಗೆ ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಎಲ್ಲಾ ಇಲಾಖೆಗಳು ಮುಂದಾಗುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳು ಹಾಗೂ ಗ್ರಾಮ ಪಂಚಾಯಿತಿ ಕಟ್ಟಡಗಳ ತಾರಸಿಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಬಳಕೆ ಮಾಡಿಕೊಳ್ಳಲು ಮಳೆ ನೀರು ಕೊಯ್ಲು ಪದ್ದತಿ ಅಳವಡಿಕೆಗೆ ಕ್ರಮ ವಹಿಸಬೇಕು. ನರೇಗಾದಡಿ ಗ್ರಾಮ ಪಂಚಾಯಿತಿಗಳಲ್ಲಿ ಮಳೆ ನೀರು ನೀರು ಕೊಯ್ಲು ರಚಿಸಬಹುದು. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿರ್ಮಾಣವಾಗುವ ಮನೆಗಳ ಕಟ್ಟಡ ಕಾಮಗಾರಿ ಅನುಮೋದನೆಯಾಗುವ ಸಂದರ್ಭದಲ್ಲಿ ಮಳೆನೀರು ಕೊಯ್ಲು ಅಳವಡಿಕೆ ವಿಧಾನಗಳನ್ನು ಕಡ್ಡಾವಾಗಿ ಅನುಸರಿಸುವಂತೆ ತಿಳಿಹೇಳಬೇಕು. ಪ್ರತಿಯೊಬ್ಬರಿಗೂ ಯೋಜನೆ ಅನುಷ್ಠಾನದ ಅರಿವು ಮೂಡಿಸಬೇಕು ಎಂದರು.
ಪ್ರಾಥಮಿಕ, ಪ್ರೌಢಶಾಲೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಲದೂತ್ ಶಿಬಿರಗಳನ್ನು ಏರ್ಪಡಿಸಿ ಶಾಲಾ-ಕಾಲೇಜುಗಳ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಹಾಗೂ ಅಂಗನವಾಡಿ ಕಟ್ಟಡ ವಿದ್ಯಾರ್ಥಿನಿಲಯಗಳಲ್ಲಿ ಮಳೆನೀರು ಸಂಗ್ರಹಣೆಗೆ ವೈಜ್ಞಾನಿಕ ರಚನೆಗಳನ್ನು ನಿರ್ಮಿಸಬೇಕು. ನೀರಿನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಂತರ್ಜಲ ಮಳೆನೀರು ಕೊಯ್ಲು ಕಡಿಮೆ ಖರ್ಚಿನಲ್ಲಿ ಆಗಲಿದ್ದು, ಅಗತ್ಯವಿದ್ದರೆ ಮಾದರಿ ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಯಿತಿಗಳಲ್ಲಿ ಸಂಪ್ರಾದಾಯಿಕ ಜಲಮೂಲಗಳಾದ ಕಲ್ಯಾಣಿ, ಕುಂಟೆ ಸೇರಿದಂತೆ 396 ಜಲಮರುಪೂರಣ ಘಟಕಗಳನ್ನು ಗುರುತಿಸಲಾಗಿದೆ. ಮಳೆನೀರು ಕೊಯ್ಲು ರಚನೆಯಿಂದ ನಿಷ್ಕ್ರಿಯ ಬೋರ್‍ವೆಲ್‍ಗಳು ಸಹ ಸಕ್ರಿಯಗೊಳ್ಳಲಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಕಂದಾಯ ಇಲಾಖೆಯು ಕೆರೆಗಳ ಒತ್ತುವರಿ ತೆರವುಗೊಳಿಸಿ ಬ್ಲಾಕ್ ಪ್ಲಾಂಟೇಷನ್ ನಿರ್ಮಿಸಿ ಜಲಶಕ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಲೋಕೊಪಯೋಗಿ ಇಲಾಖೆಯು ಮೊದಲ ಆದ್ಯತೆ ಮೇರೆಗೆ ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ರೂಫ್ ಟಾಪ್ ನಿರ್ಮಿಸಿ ಯೋಜನೆಯ ಅನುಷ್ಟಾನಕ್ಕೆ ಸಹಕರಿಸಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರಗಳು ಮಳೆನೀರು ಕೊಯ್ಲು ಬಗ್ಗೆ ಯುವ ರೈತರಿಗೆ ಯೋಜನೆಯ ಸಮಗ್ರ ಅರಿವು ಮೂಡಿಸಬೇಕು. ಮಹಿಳಾ ಕೃಷಿಕರಿಗೆ ವಿಶೇಷ ತರಬೇತಿ ನೀಡಬೇಕು. ಜಲಶಕ್ತಿ ಅಭಿಯಾನದಡಿ ಐ.ಇ.ಸಿ. ಚಟುವಟಿಕೆಗಳ ಮೂಲಕ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತರಬೇತಿ ಆಯೋಜಿಸಬೇಕು. ನರೇಗಾ ಸಹಯೋಗದಲ್ಲಿ ಶಾಲೆಗಳಲ್ಲಿ ಆಟದ ಮೈದಾನ, ಪೌಷ್ಠಿಕ ಆಹಾರದ ಕೈತೋಟ, ಸುತ್ತುಗೋಡೆ, ಶೌಚಾಲಯ, ಅರಣ್ಯ ಸಾಮರಸ್ಯ ಯೋಜನಾ ಕಾಮಗಾರಿಗಳನ್ನು ತಾಲೂಕುವಾರು ನಿಗದಿಪಡಿಸಿ ಅನುಷ್ಠಾನಗೊಳಿಸಬೇಕು ಎಂದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನೀರಿನ ಸಂರಕ್ಷಣೆ ಕುರಿತ ಯಾವುದೇ ಕಾಮಗಾರಿ ಪ್ರಕ್ರಿಯೆ ವಿವರಗಳನ್ನು ಎSಂ-ಅಖಿಖ ಪೋರ್ಟಲ್‍ನಲ್ಲಿ ನಮೂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ. ಲಕ್ಷ್ಮೀ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related