ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರದೊಂದಿಗೆ ಜನವರಿ 26ರಂದು ಗಣರಾಜ್ಯೋತ್ಸವವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಗಣರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಎಲ್ಲ ಸಂಘ ಸಂಸ್ಥೆಗಳು ಕೈಜೋಡಿಸುತ್ತಾ ಬಂದಿದ್ದು, ಯಶಸ್ವಿಯಾಗಿ ನಡೆಸಲಾಗುತ್ತಿದೆ. ಈ ಬಾರಿಯೂ ಇದೇ ಸಹಕಾರವನ್ನು ಸರ್ವರಿಂದ ಬಯಸಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಬೆಂಬಲ ನೀಡಬೇಕು. ಅರ್ಥಪೂರ್ಣ ಹಾಗೂ ವಿಶೇಷವಾಗಿ ಗಣರಾಜ್ಯೋತ್ಸವ ಆಚರಣೆಯಾಬೇಕಿದೆ ಎಂದರು.

ಸಭೆಯಲ್ಲಿ ಹಾಜರಿದ್ದ ಮುಖಂಡರು ಮಾತನಾಡಿದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಗಣರಾಜ್ಯೋತ್ಸವ ಆಚರಣೆಯಾಗಬೇಕು. ಜಿಲ್ಲೆಯ ಕೊನೆಯ ಭಾಗಗಳಲ್ಲೂ ಯಾವುದೇ ನಿರ್ಲಕ್ಷ್ಯ ತೋರದೆ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಬೇಕು. ಬ್ಯಾಂಕುಗಳು, ಕೇಂದ್ರ ಕಚೇರಿ, ನಿಗಮದ ಕಚೇರಿಗಳಲ್ಲಿ ಗಣರಾಜ್ಯೋತ್ಸವ ಆಚರಣೆ ಕೈಗೊಂಡ ಬಗ್ಗೆ ವರದಿ ಪಡೆಯಬೇಕು. ಉದ್ಯೋಗ ಮೇಳ, ಆರೋಗ್ಯ ಮೇಳದಂತಹ ಉಪಯುಕ್ತ ಕಾರ್ಯಕ್ರಮಗಳು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಏರ್ಪಡಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂಬುದೂ ಸೇರಿದಂತೆ ಇನ್ನಿತರ ಸಲಹೆ, ಅಭಿಪ್ರಾಯಗಳನ್ನು ನೀಡಿದರು. 

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಬ್ಯಾಂಕುಗಳು, ಎಲ್‍ಐಸಿ, ಕೇಂದ್ರ ಕಚೇರಿಗಳು ಸೇರಿದಂತೆ ಎಲ್ಲೆಡೆ ಶಿಸ್ತಬದ್ದವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಬೇಕು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು. ಆಚರಣೆ ಸಂಬಂಧ ಕ್ರೂಢೀಕೃತ ವರದಿಯನ್ನು ಸಲ್ಲಿಸಬೇಕು. ಉದ್ಯೋಗ ಮೇಳವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ವಿಶೇಷ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಉದ್ಯೋಗ ಮೇಳವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಆಯೋಜನೆ ಮಾಡಲಾಗುವುದು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದೆಂದು ತಿಳಿಸಿದರು. 

ಜಿಲ್ಲೆಯಲ್ಲಿ ವಿಶೇಷವಾಗಿ ರೂಪಿಸಲಾಗಿರುವ ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಮತ್ತು 6 ರಿಂದ 12ನೇ ತರಗತಿಯ ಹೆಣ್ಣು ಮಕ್ಕಳ ಆರೋಗ್ಯ ಕಾಳಜಿಗೆ ಅನುಷ್ಠಾನದಲ್ಲಿರುವ ಪ್ರಾಣಸಖಿ ಕಾರ್ಯಕ್ರಮ, ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಸರ ಸಂರಕ್ಷಣೆ, ನೈರ್ಮಲ್ಯಕ್ಕೆ ಕೈ ಜೋಡಿಸಿ ಸಿ.ಎಸ್.ಆರ್ ಅಡಿ ನೆರವು ನೀಡಿರುವ ಸಂಸ್ಥೆಗಳನ್ನು ಗೌರವಿಸಲಾಗುವುದು. ಅಲ್ಲದೇ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ತಂದಿರುವ ಕ್ರೀಡಾಪಟುಗಳನ್ನು ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಂದು ಸನ್ಮಾನಿಸಲಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಈಗಿನಿಂದಲೇ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು. ದೇಶಭಕ್ತಿ ಬಿಂಬಿಸುವ ಕಾರ್ಯಕ್ರಮಗಳು, ಪಥಸಂಚಲನಕ್ಕೆ ತಾಲೀಮು ನಡೆಸಬೇಕು. ಗಣರಾಜ್ಯೋತ್ಸವ ದಿನದಂದು ಅಧಿಕಾರಿ ಸಿಬ್ಬಂದಿ ಹಾಜರಾತಿ ಕಡ್ಡಾಯವಾಗಿದೆ. ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‍ಪಿ ಸೋಮಣ್ಣ, ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಮಹೇಶ್, ಪಣ್ಯದಹುಂಡಿ ರಾಜು, ಶಿವಶಂಕರ್, ಶ್ರೀನಿವಾಸ ಪ್ರಸಾದ್, ಜಿ. ಬಂಗಾರು, ಕೃಷ್ಣಮೂರ್ತಿ, ಮಾದಾಪುರ ರವಿ, ನಾರಾಯಣ, ಪದ್ಮಾ ಪುರುಷೋತ್ತಮ್, ಇನ್ನಿತರ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *