ಮಕ್ಕಳ ಗ್ರಾಮಸಭೆಗಳ ಬಗ್ಗೆ ಕ್ಷೇತ್ರಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮ ಸಭೆಗಳು ನಿಗದಿತ ಕಾಲಮಿತಿಯಲ್ಲಿ ಆಯೋಜಿತವಾಗಿ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಟಾನವಾಗುತ್ತಿರುವ ಬಗ್ಗೆ ಕ್ಷೇತ್ರಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆ, ಕಾರ್ಯಕ್ರಮಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮ ಸಭೆಗಳು ಕ್ರೀಯಾಶೀಲವಾಗಬೇಕು. ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಗಾಗಿ ಇರುವ ಯೋಜನೆಗಳ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹ, ಫೋಕ್ಸೋ ಪ್ರಕರಣಗಳು ಜರುಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಅಧಿಕಾರಿಗಳು ಕ್ಷೇತ್ರಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಸೂಚಿಸಿದರು. 

ಮಹಿಳೆಯರ ಮತ್ತು ಮಕ್ಕಳ ಸಬಲೀಕರಣ, ಮಾತೃವಂದನಾ ಯೋಜನೆ, ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯೋಜನೆ, ಕಾರ್ಯಕ್ರಮಗಳು ಫಲಾನುಭವಿಗಳನ್ನು ತಲುಪಿರುವ ಬಗ್ಗೆ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಯೋಜನೆಗಳ ಸದ್ಭಳಕೆಯಾಗಬೇಕು ಎಂದು ಹೇಳಿದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಯೋಜನೆಯಡಿ 60 ದಿನದೊಳಗೆ ಪ್ರಕರಣ ಇತ್ಯರ್ಥವಾಗಬೇಕಿದೆ. ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು. ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗನೆ ಬಗೆಹರಿಸಬೇಕು. ಅಗತ್ಯವಿದ್ದರೆ ಮಹಿಳೆಯರಿಗೆ ಕೌನ್ಸಲಿಂಗ್ ಏರ್ಪಡಿಸಿ ಅನುಕೂಲ ಮಾಡಿಕೊಡಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸೌಲಭ್ಯ ವಿತರಣೆಯಲ್ಲಿ ವಿಳಂಬವಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ವಿವಿಧ ಕಂತುಗಳಲ್ಲಿ ಬಿಡುಗಡೆಯಾಗುವ ಅನುದಾನ ಕ್ರಮಬದ್ಧವಾಗಿ ತಲುಪಬೇಕು. ಯೋಜನೆ ಪ್ರಗತಿಯಲ್ಲಿ ಚಾಮರಾಜನಗರ ಹೆಚ್ಚಿನ ಗುರಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಇಲಾಖೆಯು ಸಿಬ್ಬಂದಿ ಕೊರತೆ, ಅನುದಾನ ಕೊರತೆಯ ಸಬೂಬು ಹೇಳದೇ ಅಗತ್ಯ ಇರುವ ಸಂಪನ್ಮೂಲಗಳನ್ನು ಕ್ರೋಢಿಕರಿಸಿಕೊಂಡು ನಿಗದಿತ ಗುರಿ ಸಾಧನೆಗೆ ಮುಂದಾಗಬೇಕು ಎಂದು ತಾಕೀತು ಮಾಡಿದರು. 

ಉಳಿದಂತೆ ಸಖಿ ಒನ್ ಸ್ಟಾಪ್ ಸೆಂಟರ್, ಶಕ್ತಿ ಸದನ (ಸ್ವಾಧಾರ್), ಬಾಲಕಿಯರ ವಸತಿ ನಿಲಯ, ಬೇಟಿ ಬಚಾವೋ-ಬೇಟಿ ಪಡಾವೋ ಸೇರಿದಂತೆ ಇನ್ನಿತರೆ ಯೋಜನೆಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪರಿಶೀಲಿಸಿದರು.

ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *