ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಕಾವೇರಿ ನದಿ ದಾಟಿ ಪಾದಯಾತ್ರೆ ಬರುವ ಬಸವನಕಡ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ಭೇಟಿ ನೀಡಿ ಪರಿಶೀಲಿಸಿದರು.
ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಶಿವರಾತ್ರಿ ಜಾತ್ರಾ ಸಿದ್ದತೆಗಳನ್ನು ಪರಿಶೀಲಿಸಿದರು.
ಫೆಬ್ರವರಿ 14ರಿಂದ 18ರವರೆಗೆ ನಡೆಯಲಿರುವ ಶಿವರಾತ್ರಿ ಜಾತ್ರೆಗೆ ಕರ್ನಾಟಕ ಮತ್ತು ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುವುದರಿಂದ, ಕನಕಪುರ–ರಾಮನಗರ–ಚನ್ನಪಟ್ಟಣ–ಮಾಗಡಿ ಪ್ರದೇಶಗಳಿಂದ ಕಾವೇರಿ ನದಿ ಸಂಗಮದ ಮೂಲಕ ಬಸವನಕಡ ತಲುಪಿ ಅರಣ್ಯ ಮಾರ್ಗವಾಗಿ ಎಲ್ಲೇಮಾಳ–ಶಾಗ್ಯ–ಹಲಗಾಪುರ–ತೋಮಿಯಾರ್ ಪಾಳ್ಯ–ಡಿ.ಎಮ್. ಸಮುದ್ರ ಮಾರ್ಗವಾಗಿ ಕ್ಷೇತ್ರಕ್ಕೆ ತೆರಳುವ ಈ ಸಾಂಪ್ರದಾಯಿಕ ಮಾರ್ಗದ ಸುರಕ್ಷತೆ ಮತ್ತು ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕೆ.ಆರ್.ಎಸ್ ಜಲಾಶಯದಿಂದ ನೀರಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ, ಕಾವೇರಿ ನದಿಯನ್ನು ದಾಟುವ ಸ್ಥಳದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವ ಸಂಬಂಧ ಸೂಚಿಸಲಾಯಿತು.
ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗಾಗಿ ಅರಣ್ಯ ಇಲಾಖೆ ಹೆಚ್ಚಿನ ಗಸ್ತು ತಂಡ ನಿಯೋಜಿಸಲು ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರು, ಬೆಳಕು ಮತ್ತು ಮೂಲ ಸೌಲಭ್ಯಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಎಸ್‌ಟಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಮುಂಜಾಗ್ರತ ಕ್ರಮವಾಗಿ ನಿಯೋಜಿಸುವ ಸಂಬಂಧ ತಿಳಿಸಿದರು.
ಪಾದಯಾತ್ರಿಕರು ಬೆಳಕು ಇರುವ ಸಮಯದಲ್ಲಷ್ಟೇ ಅರಣ್ಯ ಪ್ರದೇಶದಲ್ಲಿ ಸಂಚರಿಸಲು ವಿನಂತಿ ಮಾಡಲಾಗಿದೆ.
ಪಾದಯಾತ್ರೆಯ ಮಾರ್ಗದಲ್ಲಿ ಆರೋಗ್ಯ ಇಲಾಖೆಯ ತುರ್ತು ಚಿಕಿತ್ಸಾ ಕೇಂದ್ರಗಳು, ವೈದ್ಯರು ಹಾಗೂ ಸಿಬ್ಬಂದಿಗಳ ನಿಯೋಜನೆ ಮಾಡಲು ಸೂಚಿಸಿದರು.
ನಿರೀಕ್ಷೆಗೂ ಮೀರಿ ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಪಾದಯಾತ್ರಿಕರ ಆಚಾರ–ವಿಚಾರಗಳಿಗೆ ಧಕ್ಕೆಯಾಗದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಭಕ್ತಾದಿಗಳು ಕೂಡ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಸುರೇಂದ್ರ, ಪ್ರಾಧಿಕಾರದ ಕಾರ್ಯದರ್ಶಿ ರಘು, ತಹಸೀಲ್ದಾರ್ ಚೈತ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.