ಚಾಮರಾಜನಗರ: ಚಾಮರಾಜನಗರ ಜಿಲ್ಲಾಡಳಿತದಿಂದ ಮಲೆ ಮಹದೇಶ್ವರ ಬೆಟ್ಟ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವಾಗಿ ಘೋಷಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯರು ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಮಲೆ ಮಹದೇಶ್ವರ ಬೆಟ್ಟವು ಅರಣ್ಯ ಪ್ರದೇಶದಲ್ಲಿ ಇರುವ ಪವಿತ್ರ ಕ್ಷೇತ್ರವಾಗಿರುವುದರಿಂದ, ಪ್ಲಾಸ್ಟಿಕ್‍ನ ಅನಿಯಂತ್ರಿತ ಬಳಕೆ ಪರಿಸರಕ್ಕೆ ಗಂಭೀರ ಹಾನಿಯನ್ನುಂಟು ಮಾಡಲಿದೆ. ಅರಣ್ಯ ಪ್ರಾಣಿ-ಪಕ್ಷಿಗಳ ಸುರಕ್ಷತೆ, ಪ್ರಕೃತಿ ಸಂರಕ್ಷಣೆ ಮತ್ತು ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಅತ್ಯಂತ ಅಗತ್ಯವಾಗಿದೆ.
ಭಕ್ತರು ಮತ್ತು ಸಾರ್ವಜನಿಕರು ನೀರು, ಪ್ರಸಾದ ಮತ್ತು ಇತರೆ ವಸ್ತುಗಳನ್ನು ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ತರಬಾರದು. ಇದರ ಬದಲಾಗಿ ಸೆಣಬಿನ ಚೀಲ (ಜ್ಯೂಟ್ ಬ್ಯಾಗ್), ಕಾಗದದ ಚೀಲ, ಸ್ಟೀಲ್, ತಾಮ್ರದಂತಹ ಪಾತ್ರೆಗಳು ಮುಂತಾದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಕ್ಷೇತ್ರದೊಳಗೆ ತರುತ್ತಿರುವುದು ಕಂಡುಬಂದಲ್ಲಿ ಜಪ್ತಿ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಸ್ವಚ್ಛತೆಗೆ ಸಹಕರಿಸಿ, ಕಸಗಳನ್ನು ಕಸದ ತೊಟ್ಟಿಗಳಲ್ಲಿ ಮಾತ್ರ ಹಾಕಬೇಕು.
ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲಿವೆ.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಭಕ್ತಾಧಿಗಳು, ಸಾರ್ವಜನಿಕರು ಮತ್ತು ವ್ಯಾಪಾರಿಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಮನವಿ ಮಾಡಿದ್ದಾರೆ.
Like this:
Like Loading...
Related