ಚಾಮರಾಜನಗರ: ಮಹಿಳೆಯರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವ ಮಹತ್ತರ ಉದ್ದೇಶದಿಂದ ವಿಶೇಷವಾಗಿ ಚಾಮರಾಜನಗರ ಜಿಲ್ಲಾಡಳಿತ ರೂಪಿಸಿರುವ ಸ್ತ್ರೀ ಸೌಖ್ಯ ಕಾರ್ಯಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆಯಿತು.
ಜಿಲ್ಲಾಧಿಕಾರಿ ಶ್ರೀರೂಪ ಅವರ ಕಾಳಜಿ ಫಲವಾಗಿ ಮಹಿಳೆಯರ ಆರೋಗ್ಯ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕ್ಯಾನ್ಸರ್ ತಪಾಸಣೆ, ಚಿಕಿತ್ಸೆ ಹಾಗೂ ಜಾಗೃತಿಗಾಗಿ ಅನುಷ್ಠಾನಕ್ಕೆ ಬಂದಿರುವ ಸ್ತ್ರೀ ಸೌಖ್ಯ ಕಾರ್ಯಕ್ರಮ ತಾಲೂಕಿನ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಉದ್ಘಾಟನೆಗೊಂಡಿತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕಾರ್ಯಕ್ರಮ ಅನುಷ್ಠಾನವಾಗುತ್ತಿದ್ದು, ಇಂದು ನಡೆದ ಕಾರ್ಯಕ್ರಮದಲ್ಲಿ ಸ್ತ್ರೀ ಸೌಖ್ಯ ಅನುಷ್ಠಾನ ಸಂಬಂಧ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಜಿಲ್ಲಾಡಳಿತದ ನಡುವೆ ಅಧಿಕೃತ ಒಪ್ಪಂದ ಪತ್ರ ವಿನಿಮಯ ಮಾಡಿಕೊಳ್ಳಲಾಯಿತು. ಜಿಲ್ಲಾಧಿಕಾರಿ ಶ್ರೀರೂಪ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾದ ಡಾ. ಟಿ. ನವೀನ್ ಅವರು ಕಾರ್ಯಕ್ರಮ ಜಾರಿಯ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.
ಕ್ಯಾನ್ಸರ್ ತಪಾಸಣೆಗಾಗಿ ಕಿದ್ವಾಯಿ ಸಂಸ್ಥೆಯಿಂದ ಬಂದಿದ್ದ ಮೊಬೈಲ್ ಕ್ಯಾನ್ಸರ್ ತಪಾಸಣಾ ಘಟಕ (ಪಿಂಕ್ ಬಸ್) ದಲ್ಲಿ ಸಕಲ ವೈದ್ಯಕೀಯ ಪರೀಕ್ಷೆ ವ್ಯವಸ್ಥೆಗಳು ಇದ್ದು, ಇದರ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ವೀಕ್ಷಿಸಿದರು.
ಮಹಿಳೆಯರಿಗೆ ಗರ್ಭಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ತಪಾಸಣೆ ನಡೆಸಿ ಚಿಕಿತ್ಸೆಗೆ ಶಿಫಾರಸು ಮಾಡುವುದು ಸ್ತ್ರೀ ಸೌಖ್ಯ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ ಅಂದಾಜು 2.5 ಲಕ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರನ್ನು ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ತಪಾಸಣೆ ಸಂದರ್ಭದಲ್ಲಿ ಕ್ಯಾನ್ಸರ್ ಅನುಮಾನಿತ ಅಥವಾ ದೃಢಪಟ್ಟ ಪ್ರಕರಣಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಮುಂದಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಕಳುಹಿಸಲಾಗುತ್ತದೆ.
ಸ್ತ್ರೀ ಸೌಖ್ಯ ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿಯೇ ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲು 14 ವರ್ಷ ಮೇಲ್ಪಟ್ಟು 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ನೀಡಲಾಗುವ ಹೆಚ್.ಪಿ.ವಿ ಲಸಿಕಾ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಬಾಲಕಿಯೋರ್ವರಿಗೆ ಲಸಿಕೆ ನೀಡುವ ಮುಖೇನ ಅಭಿಯಾನ ಆರಂಭವಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ತೀವ್ರ ಬಾಧಿಸುವ ಕ್ಯಾನ್ಸರ್ ನಂತಹ ರೋಗಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಆರೋಗ್ಯದ ಮೇಲೆ ಆಗುವ ಇನ್ನು ಹೆಚ್ಚಿನ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಮಹಿಳೆಯರ ಕಾಳಜಿಯನ್ನು ಉದ್ದೇಶವಾಗಿಟ್ಟುಕೊಂಡು ಕ್ಯಾನ್ಸರ್ ತಪಾಸಣೆ ಚಿಕಿತ್ಸೆಗಾಗಿ ಸ್ತ್ರೀ ಸೌಖ್ಯ ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲೆಗಾಗಿಯೇ ಜಾರಿ ಮಾಡಿದ್ದೇವೆ ಎಂದರು.
ಕುಟುಂಬ ನಿರ್ವಹಣೆಯ ಹೆಚ್ಚು ಜವಾಬ್ದಾರಿ ಹೊತ್ತಿರುವ ಮಹಿಳೆಯರು ಒಂದಿಲ್ಲೊಂದು ಕಾರಣದಿಂದ ಆರೋಗ್ಯ ತಪಾಸಣೆಗೆ ಮುಂದಾಗುವುದಿಲ್ಲ. ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯದೇ ಇರುವುದರಿಂದ ಇದು ಮತ್ತಷ್ಟು ಹಂತಗಳಿಗೆ ತಲುಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ತುಂಬಾ ಹರಡಿದ ನಂತರ ಬೆಳಕಿಗೆ ಬರುತ್ತದೆ. ಹೀಗಾಗಿ ಜಿಲ್ಲೆಯಲ್ಲಿಯೇ ಕ್ಯಾನ್ಸರ್ ತಪಾಸಣೆಗಾಗಿ ಬೆಂಗಳೂರಿನ ಕಿದ್ವಾಯಿ ಸಂಸ್ಥೆ ಮೊಬೈಲ್ ಘಟಕದೊಂದಿಗೆ ತಜ್ಞರು ಬಂದಿದ್ದಾರೆ. ಮಹಿಳೆಯರು ಮುಕ್ತವಾಗಿ ತಪಾಸಣೆಗೆ ಒಳಗಾಗಬೇಕು. ಆರೋಗ್ಯವಂತ ಸಮಾಜಕ್ಕಾಗಿ ಇಂತಹ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಸಾಕಷ್ಟು ಪರಿಶ್ರಮ ವಹಿಸಿ ಸ್ತ್ರೀ ಸೌಖ್ಯ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಕ್ಯಾನ್ಸರ್ ತಪಾಸಣೆ, ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮದ ಬಗ್ಗೆ ಎಲ್ಲರಿಗು ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾದ ಡಾ. ಟಿ. ನವೀನ್ ಅವರು ಮಾತನಾಡಿ ಮಹಿಳೆಯರು ಆರೋಗ್ಯ ತಪಾಸಣೆಗೆ ಹಿಂದೇಟು ಹಾಕಬಾರದು. ಆರಂಭದಲ್ಲಿಯೇ ಗರ್ಭಕಂಠದಂತಹ ಕ್ಯಾನ್ಸರ್ ಪತ್ತೆಯಾದಲ್ಲಿ ಇದನ್ನು ತಡೆಯಲು ಚಿಕಿತ್ಸೆಗಳಿವೆ. ಇತರೆ ಕ್ಯಾನ್ಸರ್‍ಗಳು ಬೇಗನೆ ಪತ್ತೆಯಾದಲ್ಲಿ ಅಗತ್ಯ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. ಚಿಕಿತ್ಸಾ ವೆಚ್ಚ ದುಬಾರಿ ಎಂದುಕೊಳ್ಳಬೇಕಿಲ್ಲ. ಬಿಪಿಎಲ್ ಕಾರ್ಡುದಾರರು, ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರು, ಯಶಸ್ವಿನಿ ಯೋಜನೆಯಡಿ ಒಳಪಡುವವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇನ್ನಿತರ ವರ್ಗಗಳಿಗೆ ಸೇರುವ ಜನರಿಗೆ ಸರ್ಕಾರದಿಂದ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹಿರಿಯ ವೈದ್ಯಾಧಿಕಾರಿ ಡಾ. ಎ.ಎಸ್. ಮಹಾಂತೇಶ್, ಎಪಿಡಮಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಪುನೀತ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಸಿಎಸ್‍ಆರ್ ಸಂಯೋಜಕರು ರಕ್ಷಿತಾ ನಾಯಕ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related