ಚಾಮರಾಜನಗರ: ವಿದ್ಯಾರ್ಥಿಗಳು ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವಿಪತ್ತು, ಸಂಕಷ್ಟ ಸಂದರ್ಭದಲ್ಲಿ ನೆರವಾಗುವ ಕಾರ್ಯಗಳಿಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಚಾಮರಾಜನಗರ ವಿಶ್ವವಿದ್ಯಾನಿಲಯ ಮತ್ತು ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ಜಿಲ್ಲಾಮಟ್ಟದ ಯುವ ರೆಡ್ ಕ್ರಾಸ್ ಸ್ವಯಂ ಸೇವಕರು ಮತ್ತು ಅದಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಚಿಕಿತ್ಸೆ ಹಾಗೂ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಾನವೀಯತೆ, ಸಮಾಜದ ಬಗ್ಗೆ ಕಳಕಳಿ ಹೊಂದಬೇಕಿದೆ. ಯಾರೇ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಸಣ್ಣ ಸಹಾಯವನ್ನ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿದೆಸೆಯಿಂದಲೇ ನೆರವು ಕಾಳಜಿ ತೋರುವ ಸ್ಪಂದನ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ರೆಡ್‍ಕ್ರಾಸ್ ಸೊಸೈಟಿಯ ಉದ್ದೇಶ ಶಾಂತಿ ಸ್ಥಾಪನೆಯಾಗಿದೆ. ಸೌಹರ್ದತೆ, ಸಾಮರಸ್ಯ ಇದರ ಮುಖ್ಯ ಉದ್ದೇಶವಾಗಿದೆ. ಇಂತಹ ಆದರ್ಶ ಕಳಕಳಿ ಹೊಂದಿರುವ ರೆಡ್‍ಕ್ರಾಸ್ ನೊಂದಿಗೆ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದು, ಅಗತ್ಯ ತರಬೇತಿಗಳನ್ನು ಪಡೆದುಕೊಳ್ಳಬೇಕು. ಪ್ರಥಮ ಚಿಕಿತ್ಸೆ, ವಿಕೋಪದಂತಹ ಪರಿಸ್ಥಿತಿಯಲ್ಲಿ ಹೇಗೆ ನೆರವು ನೀಡಬೇಕೆನ್ನುವ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಜಿಲ್ಲೆಯಲ್ಲಿ ರಕ್ತಹೀನತೆ, ಅಪೌಷ್ಠಿಕತೆಯಿಂದ ಬಳಲುತ್ತಿರುವವರಿಗೆ ಆರೋಗ್ಯದ ಉದ್ದೇಶದಿಂದ ಅನುಸರಿಸಲಾಗುವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ಸಹಕಾರವು ಅಗತ್ಯವಾಗುತ್ತದೆ. ರಕ್ತದಾನದಂತಹ ಮಹತ್ವದ ಬಗ್ಗೆ ತಿಳಿದುಕೊಂಡು ಇತರರಿಗೂ ಅರಿವು ಮೂಡಿಸುವ ಅಗತ್ಯವಿದೆ. ಆರೋಗ್ಯ ಕಾಳಜಿಯಲ್ಲಿ ವಿದ್ಯಾರ್ಥಿಗಳ ಪಾತ್ರವೂ ಸಹ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಧರ್ ಅವರು ವಿಪತ್ತು ನಿರ್ವಹಣೆ ತುರ್ತು ಸಂದರ್ಭಗಳಲ್ಲಿ ನೆರವಾಗುವಂತಹ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಹೆಚ್ಚು ತಿಳಿಸಿಕೊಡುವ ಅಗತ್ಯವಿದೆ. ಪ್ರಥಮ ಚಿಕಿತ್ಸೆಯಿಂದ ಎಷ್ಟೋ ಗಂಭೀರ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಿದೆ. ಹೀಗಾಗಿ ರೆಡ್‍ಕ್ರಾಸ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕಿದೆ ಎಂದರು.
ಜಿಲ್ಲೆಗೆ ರಕ್ತದ ಸಂಗ್ರಹಣೆ ಹೆಚ್ಚು ಅಗತ್ಯವಿದೆ. ರಕ್ತದಾನ ಶಿಬಿರಗಳನ್ನು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹೆಚ್ಚು ಆಯೋಜನೆ ಮಾಡಬೇಕು. ಕಳೆದ ಬಾರಿಯೂ ವಿಶ್ವವಿದ್ಯಾನಿಲಯವು ರಕ್ತದಾನ ಶಿಬಿರ ಏರ್ಪಡಿಸಿತ್ತು. ಇಂತಹ ಮಹತ್ವದ ಕಾರ್ಯಗಳಿಗೆ ಸಕ್ರಿಯವಾಗಿ ಪ್ರತಿಯೊಬ್ಬರು ಭಾಗವಹಿಸಬೇಕು. ಸೇವೆ ಮಾಡುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಪ್ರೊ. ಎಂ.ಆರ್. ಗಂಗಾಧರ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರೆಡ್‍ಕ್ರಾಸ್ ವತಿಯಿಂದ ವೀಲ್ ಚೇರ್ ಗಳನ್ನು ಅಶಕ್ತರಿಗೆ ಗಣ್ಯರು ವಿತರಿಸಿದರು.
ಯೂತ್ ರೆಡ್‍ಕ್ರಾಸ್ ನ ಯೂತ್ ಕೋ ಆರ್ಡಿನೇಟರ್ ಆನಂದ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ವೇತಾ ಶಶಿಧರ್, ರೆಡ್‍ಕ್ರಾಸ್ ನ ಡಾ. ಮಹೇಶ್, ರೆಡ್‍ಕ್ರಾಸ್ ಸೊಸೈಟಿಯ ಸಭಾಪತಿ ರಾಜಣ್ಣ, ವಿಶ್ವವಿದ್ಯನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಹಜೀರ ನಸ್ರೀನ್, ಬೇಗೂರು ಐಟಿಐನ ತರಬೇತಿ ಅಧಿಕಾರಿ ಹೆಚ್.ಎಸ್. ಪ್ರಸಾದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related