ನಗರದ ಇತಿಹಾಸ ಪ್ರಸಿದ್ಧ ಪುಟ್ಟಮ್ಮಣಿ ಉದ್ಯಾನವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ಸ್ವಚ್ಚತಾ ಕಾರ್ಯ

ಚಾಮರಾಜನಗರ: ನಮ್ಮ ನಗರ, ಸ್ವಚ್ಚ ನಗರ ಆಶಯದಡಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಇಂದು ಚಾಮರಾಜನಗರ ಪಟ್ಟಣದ ಇತಿಹಾಸ ಪ್ರಸಿದ್ಧ ಪುಟ್ಟಮ್ಮಣಿ ಉದ್ಯಾನವನದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ನಗರದ ಅಂಚೆ ಕಚೇರಿ ಬಳಿಯ ಆದಿಶಕ್ತಿ ದೇವಸ್ಥಾನದ ಮುಂಭಾಗದಲ್ಲಿರುವ ಪುಟ್ಟಮ್ಮಣಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ನಗರಸಭೆ, ರೋಟರಿ ಸಿಲ್ಕ್ ಸಿಟಿ, ಸಂಜೀವಿನಿ ಟ್ರಸ್ಟ್ ಹಾಗೂ ಯೂತ್ ಫಾರ್ ಸೇವಾ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಶ್ರೀರೂಪ ಅವರ ವಿಶೇಷ ಕಾಳಜಿ ವಹಿಸಿ ನಗರದ ಸಾಕಷ್ಟು ವರ್ಷಗಳಿಂದ ಪಾಳುಬಿದ್ದಿದ್ದ ರಾಜವಂಶಸ್ಥರ ಕಾಲದ ಪುಟ್ಟಮ್ಮಣಿ ಉದ್ಯಾನವನಕ್ಕೆ ಮರುಜೀವ ನೀಡಲು ಮುನ್ನುಡಿ ಬರೆದರು. ಉದ್ಯಾನವನವು ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದರೂ ಗಿಡಗಂಟಿಗಳು ಬೆಳೆದು ಅರಸರ ಕಾಲದ ಭವ್ಯ ಮಂಟಪ ಕಾಣದಂತಾಗಿತ್ತು. ಸ್ವತಹ ಜಿಲ್ಲಾಧಿಕಾರಿಗಳು, ನಗರಸಭೆಯ ಅಧಿಕಾರಿಗಳು ಕಸ ಸಂಗ್ರಹಿಸುವ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದ ಇತರರನ್ನು ಪ್ರೇರೇಪಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರತಿಬಾರಿ ಇಲ್ಲಿ ಸಂಚರಿಸುವಾಗ ಉದ್ಯಾನವನವನ್ನು ಗಮನಿಸುತ್ತಿದ್ದೆ. ಪುಟ್ಟಮ್ಮಣಿ ಉದ್ಯಾನವನ ತುಂಬಾ ಸುಂದರವಾಗಿದೆ. ಉದ್ಯಾನವನ ವಾಯುವಿಹಾರಿಗಳಿಗೆ ಅನುಕೂಲವಾಗಿದ್ದು, ಇದನ್ನು ಹಸರೀಕರಣಗೊಳಿಸುವ ನಿಟ್ಟಿನಲ್ಲಿ ಜನರಿಗೆ ಪರಿಸರ ಜಾಗೃತಿ ಮೂಡಿಸಬೇಕಾಗಿದೆ. ಸ್ವಚ್ಚತಾ ಕಾರ್ಯಕ್ಕೆ ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ ಅವರು ಮಾತನಾಡಿ ಜನರಿಗೆ ಸ್ವಚ್ಚತಾ ಜಾಗೃತಿ ಮೂಡಿಸಲು ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ರಜೆದಿನಗಳು ಸೇರಿದಂತೆ ಪ್ರತಿವಾರ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗುತ್ತದೆ. ಪಟ್ಟಣದ ಸ್ವಚ್ಚತೆಗಾಗಿ ಕಸ ಸಂಗ್ರಹಣೆ ಮಾಡುವ ಸಿಬ್ಬಂದಿಗೆ ತರಬೇತಿ ಅವಶ್ಯವಾಗಿದೆ. ಪಟ್ಟಣದ ನಾಗರಿಕರು ಸ್ವಚ್ಚತೆಯ ಅರಿವು ಹೊಂದಬೇಕು. ನಗರದ ಸ್ವಚ್ಚತೆಗೆ ಮುಂದಾಗಬೇಕು ಎಂದು ತಿಳಿಸಿದರು.

ನಗರಸಭೆ ಕಾರ್ಯಪಾಲಕ ಅಭಿಯಂತರರಾದ ಪ್ರಕಾಶ್, ಪರಿಸರ ಎಂಜಿನಿಯರ್ ರೂಪ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ರೋಟರಿ ಸಿಲ್ಕ್‍ಸಿಟಿ ಸಹಾಯಕ ಗೌರ್ನರ್ ಡಿ.ಎಸ್. ಗಿರೀಶ್, ಅಧ್ಯಕ್ಷರಾದ ಸಮಿತ್ ಕುಮಾರ್, ಬಿ.ಪಿ. ವಿಶ್ವಾಸ್, ರಕ್ಷಿತಾ, ಸಂಜೀವಿನಿ ಟ್ರಸ್ಟ್‍ನ ಸತೀಶ್, ಹಸಿರು ಪಡೆಯ ಕಾರ್ಯಕರ್ತರು, ಯೂತ್ ಫಾರ್ ಸೇವಾ ಪದಾಧಿಕಾರಿಗಳು, ಇತರರು ಇದೇ ವೇಳೆ ಇದ್ದರು.

ಸ್ವಚ್ಚತಾ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಶ್ರೀರೂಪ ಅವರು ಪುಟ್ಟಮ್ಮಣಿ ಉದ್ಯಾನವನದಲ್ಲಿ ಗಿಡ ನೆಟ್ಟು ನಿರೇರೆದರು. ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿಯವರು ತಂಪುಪಾನೀಯ ವಿತರಿಸಿದರು.

ಉದ್ಯಾನವನದಲ್ಲಿ ನೀರಿನ ಸಂಪರ್ಕ ವ್ಯವಸ್ಥೆಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿಯವರು ಉದ್ಯಾನವನವನ್ನು ಪರಿಶೀಲಿಸಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ನಗರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉದ್ಯಾನವನದ ನಿರ್ವಹಣೆಗಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

Leave a Reply

Your email address will not be published. Required fields are marked *