ಸಂವಿಧಾನ ಜಾಗೃತಿ ಜಾಥಾಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ

ಚಾಮರಾಜನಗರ: ಭಾರತ ಸಂವಿಧಾನದ 75ನೇ ವರ್ಷದ ಆಚರಣೆ ಅಂಗವಾಗಿ ಜಿಲ್ಲಾದ್ಯಂತ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥಾಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ನಗರದಲ್ಲಿ ಚಾಲನೆ ನೀಡಿದರು.

ಸಂವಿಧಾನ ಜಾಗೃತಿ ಜಾಥಾ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ರಾಜ್ಯ ಸರ್ಕಾರವು ಫೆಬ್ರವರಿ 25ರಂದು ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸಂವಿಧಾನ ಜಾಗೃತಿ ಸ್ತಬ್ಧಚಿತ್ರದ ಜಾಥಾಗೆ ಜಿಲ್ಲಾ ಉಸ್ತುವಾರಿ ಸಚಿವರು ಹಸಿರು ನಿಶಾನೆ ತೋರಿದರು.

ಸಂವಿಧಾನ ಜಾಗೃತಿಯು ಮಹತ್ತರ ಕಾರ್ಯಕ್ರಮವಾಗಿದ್ದು, ಜನವರಿ 26ರಿಂದ ಫೆಬ್ರವರಿ 23ರವರೆಗೆ ಜಾಗೃತಿ ಜಾಥಾ ಮೆರವಣಿಗೆಯು ಜಿಲ್ಲಾದ್ಯಂತ ಸಂಚರಿಸಲಿದೆ. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಕುರಿತ ಎರಡು ಸ್ತಬ್ಧಚಿತ್ರಗಳ ಪೈಕಿ ಒಂದು ಸ್ತಬ್ಧಚಿತ್ರವು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಾಗೂ ಮತ್ತೊಂದು ಸ್ತಬ್ಧಚಿತ್ರವು ಕೊಳ್ಳೇಗಾಲ, ಹನೂರು, ಯಳಂದೂರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಪಟ್ಟಣಗಳಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸಲಿವೆ.   

ಸಂವಿಧಾನದ ಆಶೋತ್ತರಗಳು, ಜನರ ಹಕ್ಕುಗಳು, ದೇಶದ ಸಾಂಸ್ಕøತಿಕ, ಐತಿಹಾಸಿಕ ಹಾಗೂ ನಾಡಿನ ಅಸ್ಮಿತೆಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಪಟ್ಟಣಗಳ ವ್ಯಾಪ್ತಿಯಲ್ಲಿ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ಹೊರಟು ಅಂತಿಮವಾಗಿ ಆಯಾಯ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಹಾಗೂ ನಗರ ಪಟ್ಟಣಗಳಲ್ಲಿ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

ಕಾರ್ಯಕ್ರಮದ ಚಾಲನೆ ವೇಳೆಯಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ,ಕಾಂಟ್ರಾಕ್ಟರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ, ಇತರರು ಇದ್ದರು.

Leave a Reply

Your email address will not be published. Required fields are marked *