ಮಲೆಮಹದೇಶ್ವರ ಬೆಟ್ಟದ ಜಾತ್ರಾ ಮಹೋತ್ಸವಕ್ಕೆ ಸಮರ್ಪಕ ಸಿದ್ದತೆ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಮುಂಬರಲಿರುವ ಮಹಾಲಯ, ದಸರಾ ಹಾಗೂ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳಿಗೆ ಅನುಕೂಲವಾಗುವ ಎಲ್ಲಾ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಹಾಲಯ, ದಸರಾ, ದೀಪಾವಳಿ ಹಾಗೂ ಕಾರ್ತಿಕ ಸೋಮವಾರ ಜಾತ್ರಾ ಕಾರ್ಯಕ್ರಮಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರು ಸರಬರಾಜನ್ನು ಸಮರ್ಪಕವಾಗಿ ಪೂರೈಸಬೇಕು. ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನೆರಳಿನ ವ್ಯವಸ್ಥೆ ಮಾಡಬೇಕು. ಸರತಿ ಸಾಲಿನಲ್ಲಿ ದರ್ಶನ ಮಾಡುವ ಭಕ್ತರಿಗೆ ಶಾಮಿಯಾನ ಹಾಕುವ ಮೂಲಕ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

ಜಾತ್ರಾ ವೇಳೆ ಹೆಚ್ಚು ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುವುದರಿಂದ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಸ್ನಾನ ಮಾಡಲು ಸ್ನಾನಗೃಹಗಳು, ಶವರ್‍ಗಳನ್ನು ಅಳವಡಿಸಬೇಕು. ಸಾಮಗ್ರಿಗಳನ್ನು ಇಡಲು ಲಗೇಜ್ ಕೌಂಟರ್ ತೆರೆಯಬೇಕು. ಅಂತರಗಂಗೆ ಸ್ನಾನ ಘಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಕ್ರಮವಹಿಸಬೇಕು ಎಂದು ಸಚಿವರು ತಿಳಿಸಿದರು.

ಜಾತ್ರೆ ನಡೆಯುವ ದಿವಸಗಳಲ್ಲಿ ನಿರಂತರವಾಗಿ ದಾಸೋಹ ಇರಬೇಕು. ಪರು (ಅಡುಗೆ) ಮಾಡುವ ಭಕ್ತಾಧಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ದೈನಂದಿನ ದಾಸೋಹದ ಬಳಿ ಮಾಡಲಾಗುತ್ತಿರುವ ನಿರಂತರ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದರು.

ವಾಹನಗಳ ನಿಲುಗಡೆಗೆ ಸೌಲಭ್ಯ ಇರಬೇಕು. ಸುಗಮ ಸಂಚಾರಕ್ಕಾಗಿ ಅವಶ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಬ್ಯಾರಿಕೇಡ್ ವ್ಯವಸ್ಥೆ ಅಗತ್ಯಕ್ಕನುಸಾರವಾಗಿ ಇರಬೇಕು. ಮದ್ಯ ಮಾರಾಟ ಸಾಗಾಣಿಕೆ ತಡೆಯಲು ತಪಾಸಣಾ ಕೇಂದ್ರಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಆರೋಗ್ಯ ಇಲಾಖೆ ಹೆಚ್ಚವರಿ ವೈದ್ಯಾಧಿಕಾರಿ ಸಿಬ್ಬಂದಿಯನ್ನು ಜಾತ್ರಾ ಸಮಯದಲ್ಲಿ ನಿಯೋಜಿಸಬೇಕು ಎಂದು ಸಚಿವರು ತಿಳಿಸಿದರು.

ಜಾತ್ರೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ತಾಳಬೆಟ್ಟದಲ್ಲಿಯೂ ಸಹ ಸ್ವಚ್ಚತಾ ಕಾರ್ಯಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರಾಧಿಕಾರದ ರಂಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಬೇಕು. ಕ್ಷೇತ್ರಕ್ಕೆ ಬರಲು ಸಾರಿಗೆ ನಿಗಮದಿಂದ ಹೆಚ್ಚು ಬಸ್ಸುಗಳ ವ್ಯವಸ್ಥೆ ಕಲ್ಪಿಸಬೇಕು. ಕ್ಷೇತ್ರದಲ್ಲಿ ಜಾತ್ರಾ ಸಂದರ್ಭದಲ್ಲಿ ಆಹಾರ ಸುರಕ್ಷತೆ ಬಗ್ಗೆ ಗಮನಹರಿಸಬೇಕು ಎಂದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರಘು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *