
ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಕರಿವರದರಾಜಸ್ವಾಮಿ ಬೆಟ್ಟದಲ್ಲಿಂದು ಜಿಲ್ಲಾಮಟ್ಟದ ಚಾರಣ ಕಾರ್ಯಕ್ರಮಕ್ಕೆ ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ) ಅವರು ಚಾಲನೆ ನೀಡಿದರು.
ಜಿಲ್ಲೆಯ ಯುವಕ, ಯುವತಿಯರನ್ನು ಸಾಹಸ ಚಟುವಟಿಕೆಗಳಲ್ಲಿ ಉತ್ತೇಜಿಸುವ ಸಲುವಾಗಿ ಕರಿವರದರಾಜಸ್ವಾಮಿ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಚಾರಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಸಿರು ನಿಶಾನೆ ತೋರಿದರು.
ಇದೇ ವೇಳೆ ಮಾತನಾಡಿದ ಮಹಮ್ಮದ್ ಅಸ್ಗರ್ (ಮುನ್ನ) ಅವರು ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳ ಜೊತೆಗೆ ಹೆಚ್ಚಾಗಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಯುವಜನರು ಕ್ರೀಡಾ ಇಲಾಖೆ ಆಯೋಜಿಸುವ ಗುಡ್ಡಗಾಡು ಓಟ, ಚಾರಣ, ಜಲಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ಅದರಲ್ಲೂ ಯುವತಿಯರು ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ಈ ಸಾಹಸ ಕ್ರೀಡೆಗಳು ನೆರವಾಗಲಿವೆ ಎಂದರು.
ಜಿಲ್ಲಾ ಕ್ರೀಡಾಂಗಣ ಸಲಹಾ ಸಮಿತಿ ಸದಸ್ಯರು ಹಾಗೂ ಹಿರಿಯ ಕ್ರೀಡಾಪಟು ವಿ. ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ ಇಂದಿನ ಯುವಕರು ದೇಶದ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳು, ಯುವಜನತೆ ಮೊಬೈಲ್‍ಗಳಿಗೆ ದಾಸರಾಗಿ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಉತ್ತಮ ಜೀವನವನ್ನು ಕಳೆದುಕೊಳ್ಳಬಾರದು. ನಿರಂತರವಾಗಿ ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಸದೃಢ ಸಮಾಜ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.
ಚಾರಣ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಕೆ. ಸುರೇಶ್ ಅವರು ಫಿಟ್ ಇಂಡಿಯಾ ಆಶಯದಂತೆ ಇಲಾಖೆ ವತಿಯಿಂದ 15ರಿಂದ 30 ವರ್ಷದೊಳಗಿನ ಯುವಕ, ಯುವತಿಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಲಸಾಹಸ ಸೇರಿದಂತೆ ಹಲವಾರು ಕ್ರೀಡೆಗಳನ್ನು ಆಯೋಜಿಸುತ್ತಿದೆ. ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಪ್ರೋತ್ಸಾಹಿಸಲು ಇಂದು ಕರಿವರದರಾಜಸ್ವಾಮಿ ಬೆಟ್ಟದಲ್ಲಿ ಭೂ ಸಾಹಸ ಕ್ರೀಡೆ ಚಾರಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಪರಿಸರ ಅಧ್ಯಯನಕ್ಕೂ ಆದ್ಯತೆ ನೀಡಲಾಗುವುದು ಎಂದರು.
ಚಾಮರಾಜನಗರ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಕಾಶ್, ಅರಣ್ಯಾಧಿಕಾರಿ ನಜೀವುಲ್ಲಾ ಷರೀಫ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಪೊಲೀಸ್ ಅಧಿಕಾರಿ ಮಹದೇವಸ್ವಾಮಿ, ಪೊಲೀಸ್ ಗುಪ್ತಚರ ವಿಭಾಗದ ಸ್ವಾಮಿ, ಕ್ರೀಡಾ ಇಲಾಖೆಯ ತರಬೇತುದಾರರಾದ ಗಣೇಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು.
ಚಾರಣ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಚಾಮರಾಜನಗರ ಕೃಷಿ ವಿಶ್ವವಿದ್ಯಾಲಯದ ಹಾಗೂ ಸಂತೇಮರಹಳ್ಳಿಯ ಕ್ರೀಡಾ ಮತ್ತು ಅರ್ಚರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.