ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರಿಂದ ಸುವರ್ಣ ಸಂಭ್ರಮದ ಓಟಕ್ಕೆ ಚಾಲನೆ

ಚಾಮರಾಜನಗರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ನಗರದಲ್ಲಿ ಏರ್ಪಡಿಸಲಾಗಿದ್ದ ‘ಸುವರ್ಣ ಸಂಭ್ರಮದ ಓಟ’ ಮ್ಯಾರಾಥಾನ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಲನೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸಮಾವೇಶಗೊಂಡಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಇತರರನ್ನೊಳಗೊಂಡು ನಡೆದ 5 ಕಿ.ಮೀ. ಮ್ಯಾರಥಾನ್ ಓಟವು ಜಿಲ್ಲಾ ಪೊಲೀಸ್ ಕಚೇರಿಯಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾಗಿ ನಂತರ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಮುಕ್ತಾಯಗೊಂಡಿತು.

ಮ್ಯಾರಾಥಾನ್‍ಗೆ ಹಸಿರು ನಿಶಾನೆ ತೋರಿ ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ರಾಜ್ಯದಲ್ಲಿ ಪೊಲೀಸ್ ಇಲಾಖೆ ಆರಂಭವಾಗಿ 50 ವರ್ಷಗಳು ತುಂಬಿದ ಸವಿನೆನಪಿಗಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದು ಸಂತಸದ ಸಂಗತಿ. ಸುವರ್ಣ ಸಂಭ್ರಮದ ಓಟವನ್ನು ಫಿಟ್ನೆಸ್ ಫಾರ್ ಆಲ್ ಮತ್ತು ಮಾದಕ ವಸ್ತು ಮುಕ್ತ ಕರ್ನಾಟಕ ಎಂಬ ಮಹತ್ವದ ಸಂಕಲ್ಪದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಾರ್ವಜನಿಕ ಸುರಕ್ಷತೆ ಪೊಲೀಸ್ ಇಲಾಖೆಯ ಮೊದಲ ಆದ್ಯತೆಯಾಗಿದೆ. ಪೊಲೀಸರು ಪ್ರತಿದಿನ ಒತ್ತಡದ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುತ್ತಾರೆ. ದೈಹಿಕ, ಮಾನಸಿಕ ಹಾಗೂ ಶಾರೀರಿಕ ಸುಸ್ಥಿತಿಯನ್ನು ಕಾಪಾಡಿಕೊಳ್ಳುವುದು ಪೊಲೀಸರಿಗೆ ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.
ಪೊಲೀಸ್ ಅಧಿಕಾರಿಗಳು, ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *