ವಿಕಲಚೇತನರಿಗೆ ಅನುಕಂಪ ಬೇಡ, ಆತ್ಮಸ್ಥೈರ್ಯ ತುಂಬಿ : ಲೋಕಸಭಾ ಸದಸ್ಯರಾದ ಸುನೀಲ್ ಬೋಸ್

ಚಾಮರಾಜನಗರ: ವಿಶೇಷಚೇತನರಿಗೆ ಅನುಕಂಪ ತೋರುವುದು ಬೇಡ, ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಅವರಲ್ಲಿ ಅತ್ಮಸ್ಥೈರ್ಯ ತುಂಬಿ, ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡುವಂತೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಸಲಹೆ ಮಾಡಿದರು.

  ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನಗರಸಭೆ, ತಾಲೂಕು ಪಂಚಾಯಿತಿ ಹಾಗೂ ಕೃತಕ ಅಂಗಾಂಗಗಳ ತಯಾರಿಕಾ ಸಂಸ್ಥೆ (ಅಲಿಂಮ್ಕೋ) ಸಹಯೋಗದಲ್ಲಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನ-ಸಲಕರಣೆ ವಿತರಿಸಲು ಆಯೋಜಿಸಲಾಗಿದ್ದ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಕೃತಕ ಅಂಗಾಂಗ ತಯಾರಿಕಾ (ಅಲಿಂಮ್ಕೋ) ಸಂಸ್ಥೆಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸುವ ಸಲುವಾಗಿ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ತಪಾಸಣಾ ಶಿಬಿರಕ್ಕೆ ಇಂದು ಚಾಮರಾಜನಗರ ತಾಲೂಕಿನಲ್ಲಿ ಚಾಲನೆ ದೊರೆತಿದೆ ಎಂದರು.

  ವಿಕಲಚೇತನರನ್ನು ಸಮಾಜದಲ್ಲಿ ಯಾರು ಸಹ ಕಡೆಗಣಿಸಬಾರದು. ವಿಕಲಚೇತನರಿಗೆ ದೇವರು ವಿಶಿಷ್ಠವಾದ ಶಕ್ತಿ ನೀಡಿರುವುದರಿಂದ ಅವರನ್ನು ದೇವರ ಮಕ್ಕಳೆನ್ನಬಹುದು. ವಿಕಲಚೇತನರು ದೈಹಿಕವಾಗಿ ಕಡಿಮೆ ಎನಿಸಿದರು ಮಾನಸಿಕವಾಗಿ ನಮಗಿಂತ ಹೆಚ್ಚು ಸದೃಢರಾಗಿದ್ದಾರೆ. ಅಂಗವಿಕಲತೆ ಶಾಪವಲ್ಲ, ಅದರ ಬಗ್ಗೆ ಇರುವ  ಮೂಢನಂಬಿಕೆ ತೊಡೆದುಹಾಕಬೇಕು. ಪಶ್ಚಾತ್ತಾಪ ಪಡಬಾರದು. ನಾಗರಿಕರಾದ ನಾವೆಲ್ಲರು ವಿಕಲಚೇತನರೊಂದಿಗೆ ಬೆರೆಯಬೇಕು. ನಮ್ಮಲ್ಲಿನ ಉತ್ತಮ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ಆತ್ಮಸ್ಥೈರ್ಯ ತುಂಬಬೇಕು ಎಂದರು.

  ಅಂಗವಿಕಲರು ಪ್ಯಾರಾ ಒಲಂಪಿಕ್ಸ್‍ನಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಸಮಾಜದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಇತರರಂತೆ ಗೌರವದಿಂದ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು. ಧೈರ್ಯ ತುಂಬಬೇಕು, ಆಗಮಾತ್ರ ಅವರಲ್ಲಿ ಮಾನಸಿಕ ಶಕ್ತಿ ಹೆಚ್ಚಾಗಲಿದೆ. ಚಾಮರಾಜನಗರ ತಾಲೂಕಿನಲ್ಲಿ ಸಾಧನ-ಸಲಕರಣೆಗಾಗಿ 250 ಮಂದಿ ನೊಂದಾಯಿಸಿಕೊಂಡಿದ್ದು, ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಶಿಬಿರಗಳನ್ನು ಆಯೋಜಿಸಲಾಗಿದೆ. ಶಿಬಿರದ ಸದುಪಯೋಗವನ್ನು ವಿಕಲಚೇತನರು ಪಡೆಯಬೇಕು ಎಂದು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ತಿಳಿಸಿದರು. 

  ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ. ಶೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸುರೇಶ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಂಜುನಾಥ್, ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಶಿಬಿರದಲ್ಲಿ ನೊಂದಣಿ ಪ್ರಕ್ರಿಯೆಯನ್ನು ವೀಕ್ಷಿಸಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಿಬಿರದ ಯಶಸ್ಸಿಗಾಗಿ ಅಗತ್ಯ ಸಲಹೆ, ಸೂಚನೆ ನೀಡಿದರು.

Leave a Reply

Your email address will not be published. Required fields are marked *