ಡಾ. ಬಿ.ಆರ್. ಅಂಬೇಡ್ಕರ್ ಜೀವನಸಾಧನೆ, ವಿಚಾರಧಾರೆಗಳ ಜಾಗೃತಿ ಅಗತ್ಯ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಸಂವಿಧಾನ ರಚನೆ ಮೂಲಕ ದೇಶದ ಎಲ್ಲಾ ವರ್ಗಗಳ ಜನರಿಗೆ ಸಮಾನವಕಾಶ ಕಲ್ಪಿಸಿದ ಜಗತ್ತಿನ ಮಹಾನ್ ಮೇಧಾವಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆ, ಮೌಲ್ಯಯುತ ವಿಚಾರಧಾರೆಗಳ ಬಗ್ಗೆ ಜನಸಾಮಾನ್ಯರು ಜಾಗೃತರಾಗುವ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

   ಭಾರತರತ್ನ, ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್‍ರವರ 135ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್‍ರವರ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಡಾ. ಬಿ.ಆರ್. ಅಂಬೇಡ್ಕರ್ ಅಸಾಧಾರಣ ವಿಚಾರಧಾರೆಗಳ ಕುರಿತು ಜನಸಾಮಾನ್ಯರಿಗೆ ಬೆಳಕು ಚೆಲ್ಲಲು ಜಯಂತಿ ಹಿಂದಿನ ದಿನವೇ ವಿಚಾರಸಂಕಿರಣ ಆಯೋಜಿಸಲಾಗುತ್ತಿದೆ. ಇದು ಜಿಲ್ಲೆಯ ವಿಶೇಷವಾಗಿದ್ದು, ಅಂಬೇಡ್ಕರ್ ಸ್ಮರಣೆ ಪ್ರತಿಯೊಬ್ಬರಿಗೂ ಗೌರವದ ಸಂಕೇತವಾಗಿದೆ. ಅಂಬೇಡ್ಕರ್ ಅವರು ವಿಶ್ವದ ಪ್ರಸಿದ್ಧ ಸಮಾಜಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞರು ಆಗಿದ್ದಾರೆ. ಲಂಡನ್ ಸ್ಕೂಲ್ ಆಫ್ ಏಕಾನಾಮಿಕ್ಸ್‍ನ ನಲ್ಲಿ ಅಧ್ಯಯನ ಮಾಡಿದ ಅರ್ಥಶಾಸ್ತ್ರಜ್ಞರು ಆದ ಡಾ. ಬಿ.ಆರ್. ಅಂಬೇಡ್ಕರ್ ಆರ್.ಬಿ.ಐ ಸ್ಥಾಪನೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಣ, ಸಂಘಟನೆ, ಹೋರಾಟ ಅವರ ಮೂಲಧ್ಯೇಯವಾಗಿತ್ತು ಎಂದರು.

  ದೇಶದಲ್ಲಿ ಅಸ್ಪøಶ್ಯರು, ಶೋಷಿತರು, ದೀನದಲಿತರು, ಅಲ್ಪಸಂಖ್ಯಾತರ ಏಳಿಗೆಗೆ ಜೀವನವನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಅವರು ಮಹಿಳೆಯರಿಗೆ ಹೆರಿಗೆ ರಜೆ, ಹಿಂದು ಕೋಡ್ ಬಿಲ್ ಪ್ರತಿಪಾದಿಸಿದರು. ರೈತರ ಜೀವನಮಟ್ಟ ಸುಧಾರಿಸಲು ಬೆಂಬಲಬೆಲೆ ಜಾರಿಗೆ ಒತ್ತು ನೀಡಿದರು. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದರು. ದೇಶದಲ್ಲಿ ಪ್ರತಿಯೊಬ್ಬರಿಗೂ ಅದರಲ್ಲೂ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದರು. ಸಂವಿಧಾನದಲ್ಲಿ ಅಂಬೇಡ್ಕರ್ ಅಡಕಗೊಳಿಸಿರುವ ಹಕ್ಕು, ಕರ್ತವ್ಯಗಳು ಹಾಗೂ ಕಾನೂನುಗಳ ಅನುಷ್ಠಾನದಿಂದ ದೇಶ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

  ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗೆ ಪೂರ್ವಭಾವಿಯಾಗಿ ಆಯೋಜಿಸುವ ವಿಚಾರಸಂಕಿರಣ ಅಂಬೇಡ್ಕರ್ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಹೆಚ್ಚಾಗಿ ಪಸರಿಸಲು ಸಹಕಾರಿಯಾಗಿದೆ. ದೇಶದ ಮೊದಲ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಅವರು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದರು. ಶಿಕ್ಷಣ ಎಲ್ಲರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಅನ್ಯಾಯವನ್ನು ಪ್ರಶ್ನೆ ಮಾಡುವ ಮನೋಭಾವ ಮೂಡಲಿದೆ. ಇದು ಸಮಾಜದಲ್ಲಿ ಸಮಾನತೆ ತರಲು ನೆರವಾಗಲಿದೆ ಎಂದರು. 

  ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ತಿ. ನರಸೀಪುರ ನಳಂದ ಬುದ್ಧವಿಹಾರದ ಪೂಜ್ಯ ಬೋಧಿರತ್ನ ಬಂತೇಜಿ ಅವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸಾಗಲು ಅವರ ವಿಚಾರಧಾರೆಗಳು, ಆಶಯಗಳು ಸಂಪೂರ್ಣ ಜಾರಿಯಾಗಬೇಕು. ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ನೀತಿ ಅನುಷ್ಟಾನಗೊಳ್ಳಬೇಕು. ವಿಶ್ವದ ಬಹುತೇಕ ರಾಷ್ಟ್ರಗಳು ಅಂಬೇಡ್ಕರ್ ಜಯಂತಿಯನ್ನು ‘ವಿಶ್ವಜ್ಞಾನ’ ದಿನವನ್ನಾಗಿ ಆಚರಿಸುತ್ತಿವೆ. ನಾವು ಅವರಿಗೆ ಹೆಚ್ಚಿನ ಗೌರವ ನೀಡಬೇಕು. ಭಾರತದಲ್ಲಿ ಜನಸಾಮಾನ್ಯರು ಗೌರವಯುತವಾಗಿ ಬದುಕುವ ಹಕ್ಕು ನೀಡಿದವರು ಅಂಬೇಡ್ಕರ್ ಮಾತ್ರ ಎಂದು ತಿಳಿಸಿದರು.

  ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮೈಸೂರು ಕೆ.ಆರ್. ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞರಾದ ಡಾ. ಡಿ. ಜಗನ್ನಾಥ್ ಅವರು ಡಾ. ಬಿ.ಆರ್. ಅಂಬೇಡ್ಕರ್ ದೃಷ್ಠಿಕೋನದಲ್ಲಿ ಧಮ್ಮ ಮತ್ತು ಸಾಮಾಜಿಕ ಸಾಮರಸ್ಯ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಎಂ. ವೆಂಕಟೇಶ್ ಅವರು ಡಾ. ಬಿ.ಆರ್. ಅಂಬೇಡ್ಕರ್‍ರವರ ವೈಚಾರಿಕತೆ ಮತ್ತು ಪ್ರಸ್ತುತ ಸನ್ನಿವೇಶ ಕುರಿತು ವಿಚಾರ ಮಂಡನೆ ಮಾಡಿದರು.

  ಡಿ.ವೈ.ಎಸ್.ಪಿ. ಸ್ನೇಹರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

  ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *