

ಉದ್ಯಾನ ನಗರಿ ಮೈಸೂರಿನ ಹಿರಿಯ ಬರಹಗಾರರಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹೆಸರು ಪಡೆದಿರುವ ಡಾ.ಸಿ. ನಾಗಣ್ಣನವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಮಳಲಿ ವಸಂತಕುಮಾರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೊಂದು ಹೆಮ್ಮೆಯ ವಿಚಾರ. "ಕರ್ತವ್ಯ ಮಾಡು, ಫಲ ನಿರೀಕ್ಷಿಸದಿರು"- ಎನ್ನುವ ಗೀತಸಾರದಂತೆ ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಸಾಹಿತ್ಯದಲ್ಲೂ ಆಸಕ್ತಿ ಮೂಡಿಸಿ ಎರಡು ಕಡೆಯೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ, ನಿವೃತ್ತರಾದ ನಂತರವೂ ಕೂಡ ಮೈಸೂರಿನ ಹಲವು ಕಡೆ ನಮ್ಮ ನಾಡು- ನುಡಿ- ಸಂಸ್ಕೃತಿ- ಸಾಹಿತ್ಯ ಇನ್ನಿತರ ಕ್ಷೇತ್ರಗಳಲ್ಲಿ, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ತಮ್ಮ ಅನುಭವದ ಚಿಂತನೆಗಳನ್ನು ಇವತ್ತಿನ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತಿದ್ದಾರೆ.
ಎಲ್ಲರನ್ನೂ ಕೂಡ ಆತ್ಮೀಯವಾಗಿ ಮಾತನಾಡಿಸುತ್ತಾ ಅವರವರ ಪ್ರತಿಭೆಗೆ ತಕ್ಕಂತೆ ಅವರನ್ನು ಗುರುತಿಸುವ, ಪ್ರೋತ್ಸಾಹಿಸುವ ಗುಣವನ್ನು ಹೊಂದಿದ್ದಾರೆ.
ಹಿರಿಯರು, ಕಿರಿಯರು ಎನ್ನದೇ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುತ್ತಾರೆ. ಅಪಾರಜ್ಞಾನ ಇದ್ದರೂ ಕೂಡ ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರದು. ಉತ್ತಮ ಬರಹಗಾರರು, ವಿಮರ್ಶಕರು, ಅಂತೆಯೇ ಉತ್ತಮವಾಗಿ ವಾಗ್ಮಿ ಕೂಡ. ಯಾವುದೇ ಸಾಹಿತ್ಯ ಕಾರ್ಯಕ್ರಮದಲ್ಲೂ ಇವರು ಪ್ರಸ್ತುತ ಪಡಿಸುವ ಮಾತಿನ, ಬರಹಗಳ ವಿಮರ್ಶೆ ನಿಜಕ್ಕೂ ಅರ್ಥಪೂರ್ಣ ಹಾಗೂ ಮೌಲಿಕವಾಗಿರುತ್ತವೆ. ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಮೂಲ ಸಾಮಗ್ರಿಗಳನ್ನ ಸಂಗ್ರಹಿಸಿ, ಎಲ್ಲವನ್ನು ಕೂಡ ಉದಾರಣೆಯ ಮೂಲಕ ಪ್ರಚುರ ಪಡಿಸುತ್ತಾರೆ.
ಪ್ರತಿಯೊಂದು ಮಾತು ಕೂಡ ಮೌಲ್ಯಯುತವಾಗಿರುತ್ತದವೆ. ಯಾವುದೇ ಕಾರ್ಯಕ್ರಮಕ್ಕೆ ಬರಬೇಕಾದರೂ ಕೂಡ ಅವರು ಪೂರ್ವ ತಯಾರಿ ಯೊಂದಿಗೆ ಅವತ್ತಿನ ಕಾರ್ಯಕ್ರಮಕ್ಕೆ ಶೋಭೆ ತರುತ್ತಾರೆ. ಇದು ಒಬ್ಬ ಗುರುವಿಗೆ, ಸಾಹಿತಿಗೆ ಇರಬೇಕಾದ ಬದ್ಧತೆ. ಇವರು ತಮ್ಮ ವೃತ್ತಿಯ ಜೊತೆಗೆ ಅನೇಕ ಪ್ರವೃತ್ತಿಗಳನ್ನ ಕೂಡ ಮೈಗೂಡಿಸಿಕೊಂಡವರು. ಮುಖ್ಯವಾಗಿ ಹೇಳಬೇಕೆಂದರೆ ಇವರು ಒಂದು ಕಡೆ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರವರೆಗೆ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ನಿವೃತ್ತಿಯಾದ ನಂತರ ಪೂರ್ಣ ಪ್ರಮಾಣದಲ್ಲಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ತಮ್ಮ ಸಾಹಿತ್ಯ ಕೃತಿಗಳ, ಮಾತುಗಳ ಜೊತೆ ಜೊತೆಗೆ ಸಮಾಜಮುಖಿ ಚಿಂತನೆಗಳೊಂದಿಗೆ ಮುಖಾಮುಖಿಯಾಗುತ್ತಿದ್ದಾರೆ.
ಅದರಲ್ಲೂ ಮೈಸೂರು ಆಕಾಶವಾಣಿ ಅಂತಹ ಶ್ರವ್ಯ ಮಾಧ್ಯಮದಲ್ಲೂ ಕೂಡ ಇವರು ಮೇಲುಗೈ ಸಾಧಿಸಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಇವರ ಅನೇಕ ಚಿಂತನೆಗಳು, ಚರ್ಚೆಗಳು, ಭಾಷಣಗಳು, ಸಂದರ್ಶನಗಳು ಎಲ್ಲವೂ ಕೂಡ ಪ್ರಸಾರವಾಗಿವೆ, ಪ್ರಸಾರವಾಗುತ್ತಿವೆ. ಪ್ರಚಲಿತ ವಿಷಯಗಳಿಗೆ ತಕ್ಕಂತೆ ಇವರನ್ನ ಅನೇಕ ಬಾರಿ ಮೈಸೂರು ಆಕಾಶವಾಣಿ ಸಂಪರ್ಕಿಸಿ ಇವರಿಂದ ಉತ್ತಮ ಅಂಶಗಳು ಕೇಳುಗರಿಗೆ ಸಿಗುವಂತೆ ಮಾಡಿದೆ. ಬಾನೂಲಿ ಸಾಹಿತ್ಯದಲ್ಲಿ ಕೂಡ ಇವರ ಸಾಧನೆ ಅಪಾರ. ಇವರ ಮಾತು ಸ್ಪಷ್ಟ, ಸರಳ, ಸುಂದರವಾದ ಭಾಷಾ ಸೊಗಡು, ಮಾಹಿತಿಗಳ ಪ್ರಸ್ತುತತೆ ಎಲ್ಲವೂ ಕೂಡ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಸದಾ ಅಧ್ಯಯದಲ್ಲಿ ತೊಡಗಿಕೊಂಡು ಅನೇಕ ಯುವಕವಿ, ಲೇಖಕರ ಪುಸ್ತಕಗಳಿಗೂ ಕೂಡ ಮುನ್ನುಡಿ, ಬೆನ್ನುಡಿಗಳನ್ನು ನಿರಂತರವಾಗಿ ಬರೆಯುತ್ತಾ, ಪ್ರೋತ್ಸಾಹ ಮಾಡುತ್ತಾ ಬರುತ್ತಿದ್ದಾರೆ.
ಇವರ ಸಾಹಿತ್ಯ ವಲಯ, ಸ್ನೇಹಿತರ ಬಳಗ ತುಂಬಾ ವಿಸ್ತಾರವಾದದ್ದು. ಅಪಾರ ವಿದ್ಯಾರ್ಥಿಗಳನ್ನು ಸಂಪಾದಿಸಿದ್ದಾರೆ.
ಜೊತೆಗೆ ಆಕಾಶವಾಣಿಯಲ್ಲಿ ಕೇಳುಗರನ್ನು ಕೂಡ ಹೆಚ್ಚು ಪಡೆದಿದ್ದಾರೆ. ಇವರು ತಮ್ಮ ಬರಹಗಳಲ್ಲಿ, ಮಾತುಗಳಲ್ಲಿ ಬಳಸುವ ಪದಪುಂಜಗಳು ಮೌಲ್ಯಯುತವಾಗಿರುತ್ತವೆ, ಜೊತೆಗೆ ಚಿಂತನೀಯವಾಗಿರುತ್ತವೆ. ಇವರು ಇಂಗ್ಲೀಷ್ ಸಾಹಿತ್ಯವನ್ನು ಕೂಡ ಅಪಾರವಾಗಿ ಅಧ್ಯಯನ ಮಾಡಿದ್ದರ ಫಲವಾಗಿ ಕನ್ನಡದಲ್ಲಿ ಇವರ ಪ್ರತಿಯೊಂದು ಮಾತು, ಬರಹ, ಸಾಹಿತ್ಯ ಎಲ್ಲವೂ ಕೂಡ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಚಂದನದ "ಬೆಳಗು"- ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.
ಡಾ.ಸಿ .ನಾಗಣ್ಣನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರಿಂದ, ಪ್ರಸಾರಾಂಗದ ನಿರ್ದೇಶಕರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದರಿಂದ ನಾ ಮೊದಲೇ ಹೇಳಿದಂತೆ ಅಪಾರ ಶಿಷ್ಯ ವರ್ಗವನ್ನ ಪಡೆದಿದ್ದಾರೆ.
ಮುಖ್ಯವಾಗಿ ಹೇಳುವುದಾದರೆ..... ಇವರು ಭಾಷಾಂತರ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇವರು ಹಲವು ಪ್ರಮುಖ ವಿಶ್ವವಿದ್ಯಾಲಯಗಳ ತಜ್ಞರ ಸಮಿತಿ ಸದಸ್ಯರಾಗಿ ಕೂಡ ಸೇವೆಯನ್ನು ಸಲ್ಲಿಸಿರುವುದು ಗಮನಾರ್ಹಕರ ಸಂಗತಿ. ಸ್ಥಳೀಯವಾಗಿ ಅಷ್ಟೇ ಅಲ್ಲದೆ ಅಂತರರಾಷ್ಟ್ರೀಯ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಅಂಕಣಕಾರರಾಗಿ ಕೂಡ ಹೆಸರು ಮಾಡಿದವರು.
ಮೈಸೂರು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಅನೇಕ ಅಂಕಣ ಬರಹಗಳು ಕೂಡ ಪ್ರಕಟವಾಗಿವೆ.
ಇನ್ನು ಪ್ರಶಸ್ತಿಯ ವಿಷಯಕ್ಕೆ ಬಂದರೆ…..ಶ್ರೇಷ್ಠ ಬರಹಗಾರರಾದ ಪ್ರಾಧ್ಯಾಪಕರಾಗಿದ್ದ ಡಾ.ಮಳಲಿ ವಸಂತ ಕುಮಾರ್ ಅವರು ‘ಮನುಕುಲದ ವಾಗ್ಮಿ’ ಎಂದು ಹೆಸರು ಪಡೆದಿದ್ದರು. ಅನೇಕ ಉತ್ಕೃಷ್ಟ ಸಾಹಿತ್ಯವನ್ನು ಕನ್ನಡ ಸರಸ್ವತ ಲೋಕಕ್ಕೆ ನೀಡಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಬರಹಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ತಾವೇ 46 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅವರ ನೆನಪಿನಲ್ಲಿ ಕುಟುಂಬದವರು ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಬರಹಗಾರರಿಗೆ , ಕನ್ನಡಪರ ಹೋರಾಟಗಾರರಿಗೆ ಈ ಪುರಸ್ಕಾರ ನೀಡುವಂತೆ ಯೋಜನೆ ರೂಪಿಸಿದ್ದಾರೆ.
ಇದರ ಫಲವಾಗಿ ಪ್ರಶಸ್ತಿಯನ್ನು ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ, ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕೋಶಾಧ್ಯಕ್ಷರಾದ ಡಿ.ಆರ್.ವಿಜಯ ಕುಮಾರ್ ಮತ್ತು ದತ್ತಿದಾನಿಗಳ ಪರವಾಗಿ ಶಾಂತ ವಸಂತ ಕುಮಾರ್ ಭಾಗವಹಿಸಿ, ಕೂಲಂಕುಶವಾಗಿ ಚರ್ಚಿಸಿ ಡಾ.ಸಿ.ನಾಗಣ್ಣನವನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕೃತರಾದ ಡಾ.ಸಿ.ನಾಗಣ್ಣನವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಅವರ ಮುಂದಿನ ಸಾರಸ್ವತ ಸೇವೆಗೆ ಶುಭವನ್ನು ಕೂಡಾ ಕೋರಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಕುರಿತು ಸಂತೋಷವನ್ನು ವ್ಯಕ್ತ ಪಡಿಸಿರುವ ಡಾ.ಸಿ.ನಾಗಣ್ಣನವರು ಅಧ್ಯಕ್ಷರಿಗೆ ಪತ್ರವನ್ನು ಬರೆದು “ನನ್ನ ಸುದೀರ್ಘ ಬರಹದ ಬದುಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಯಾವುದೇ ಪ್ರಶಸ್ತಿಗೆ ನಾನು ಭಾಜನನಾಗುತ್ತಿರುವುದು ಇದೇ ಮೊದಲು. ತಮ್ಮ ಅಧ್ಯಕ್ಷಾವಧಿಯಲ್ಲಿ ಇದು ಸಾಕಾರವಾದ್ದು ನನ್ನ ಸಂತೋಷಕ್ಕೆ ಕಾರಣವಾಗಿದೆ. ಅದಕ್ಕಾಗಿ ತಮಗೆ ಹಾಗೂ ಆಯ್ಕೆ ಸಮಿತಿಯ ಸದಸ್ಯರಿಗೆ ನನ್ನ ವಂದನೆಗಳನ್ನು ಸಮರ್ಪಿಸುತ್ತಿದ್ದೇನೆ” ಎಂದು ತಮ್ಮ ಕೃತಜ್ಞತೆಗಳನ್ನು ವ್ಯಕ್ತ ಪಡಿಸಿದ್ದಾರೆ.
ನಾಗಣ್ಣನವರ ಬಗ್ಗೆ ಹೇಳುವುದಾದರೆ……
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ
ತಂದೆ ಕಾಳಪ್ಪ ತಾಯಿ ಚಿನ್ನಮ್ಮ ರವರ ಮಗನಾಗಿ 15.10.1953 ರಲ್ಲಿ ಜನಿಸಿದರು.
ಕವಿ, ಲೇಖಕ, ವಿಮರ್ಶಕ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಸಿ ನಾಗಣ್ಣರವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ತಮ್ಮ ಹುಟ್ಟೂರಿನಲ್ಲಿಯೇ ನಡೆಯಿತು.
ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವು ನಂಜನಗೂಡಿನ ಸರ್ಕಾರಿ ವಿವಿಧೋದ್ದೇಶ ಪ್ರೌಢ ಶಾಲೆಯಲ್ಲಿ. ಶಾರದಾ ವಿಲಾಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ವಿಜ್ಞಾನ ಕ್ಷೇತ್ರವಾದರೂ ಅವರನ್ನು ಆಕ್ರಮಿಸಿಕೊಂಡಿದ್ದು ಮಾತ್ರ ಸಾಹಿತ್ಯ ಕ್ಷೇತ್ರ!. ಸಾಹಿತ್ಯದಲ್ಲಿ ಅವರ ಆಸಕ್ತಿಯು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರದಲ್ಲಿ ಮಹಾರಾಜ ಕಾಲೇಜಿನಲ್ಲಿ 15 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸಾರಂಗದಲ್ಲಿ ನಿರ್ದೇಶಕರಾಗಿ ನಿವೃತ್ತರಾದರು. 40ಕ್ಕೂ ಹೆಚ್ಚು ಅಧ್ಯಯನ ಕ್ಷೇತ್ರದ ಅನುಭವ ಇವರನ್ನು ಮೇರು ಶಿಖರಕ್ಕೀರಿಸಿತು.
ಎಲ್ಲವುಗಳಿಂದಾಗಿ ಮೂವತ್ತು ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿ, ಸೇರಿದಂತೆ ಹಲವು ಕಡೆ ಕನ್ನಡದ ಸಲಹಾ ಸಮಿತಿಯ ಸದಸ್ಯರಾಗಿಯೂ ಕೂಡ ಕಾರ್ಯನಿರ್ವಹಿಸಿರುವುದು ಇವರ ಮತ್ತೊಂದು ಹೆಗ್ಗಳಿಕೆ. ಅನುವಾದಕರಾಗಿಯು ಸೇವೆ ಸಲ್ಲಿಸಿದ್ದಾರೆ.
ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ಇವರು ಪಡೆದಿದ್ದಾರೆ. ವರ್ಧಮಾನ ಪ್ರಶಸ್ತಿ, ಶರಣ ಶ್ರೀ ಪ್ರಶಸ್ತಿ, ರೋಟರಿ ರಾಜ್ಯೋತ್ಸವ ಪ್ರಶಸ್ತಿ, ಚಾಮರಾಜನಗರ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು, ಕನ್ನಡಪರ ಹೋರಾಟಗಾರರು ಇವರನ್ನು ಸನ್ಮಾನಿಸಿದ್ದಾರೆ. ಯಳಂದೂರು ತಾಲೂಕಿನಲ್ಲಿ ನಡೆದ ಮೂರನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗಿದ್ದಾರೆ.
ಇವರ ಮನದ ಮಾತು ಹಿತಮಿತವಾಗಿದ್ದರು ಇವರ ಸಾಹಿತ್ಯದ ಮಾತು ಅಪಾರವಾದದ್ದು.
ಇನ್ನೊಂದು ಮುಖ್ಯ ಅಂಶವನ್ನ ಮರೆತಿದ್ದೆ. ಇವರು ಚಂದನ ವಾಹಿನಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿನ ಅರಮನೆಯ ಆವರಣದಿಂದ ದಸರಾ ಜಂಬೂ ಸವಾರಿಯ ವೀಕ್ಷಕ ವಿವರಣೆಗಾರರಾಗಿಯೂ
10 ಕ್ಕೂ ಹೆಚ್ಚು ವರ್ಷಗಳಿಂದ ದಸರಾ ಮೆರವಣಿಗೆಯ ಸಮಗ್ರ ಮತ್ತು ಮಾಹಿತಿಯುಕ್ತ ವ್ಯಾಖ್ಯಾನಕ್ಕಾಗಿ (ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ) ಅವರು ಹೆಸರುವಾಸಿಯಾಗಿದ್ದಾರೆ, ಇದನ್ನು 60 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ಇವರು ಅಟ್ಲಾಂಟಿಕ್ ಸಿಟಿ ಯುಎಸ್ಎಯಲ್ಲಿ “ಅಕ್ಕ” ಸಮ್ಮೇಳನದಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.
ಇತ್ತೀಚಿಗೆ ನಿಧನರಾದ “ಮೈಸೂರು ಮಿತ್ರ” ಮತ್ತು “ಸ್ಟಾರ್ ಆಫ್ ಮೈಸೂರು” ಪತ್ರಿಕೆಯ ಸಂಸ್ಥಾಪನಾ ಸಂಪಾದಕರಾದ ಶ್ರೀ ಕೆ ಬಿ ಗಣಪತಿ ಅವರ ನಿಧನದ ಹಿನ್ನೆಲೆಯಲ್ಲಿ “ಭಾರತೀಯ ವಿದ್ಯಾ ಭವನದ” ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇಂತಹ ಜನಾನುರಾಗಿ ಡಾ ಸಿ ನಾಗಣ್ಣ ಅವರ ಸಾಹಿತ್ಯ, ವ್ಯಕ್ತಿತ್ವ ಎಲ್ಲದರ ಬಗ್ಗೆ ಎಷ್ಟು ಬರೆದರೂ ಸಾಲದು ಇವರ ಸರಳತೆ ಇವರನ್ನು ಮತ್ತಷ್ಟು ಮೇಲಕ್ಕೀರಿಸಿದೆ. ಈಗಲೂ ಕೂಡ ಏನಾದರೊಂದು ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ವಿಶೇಷ ಅಭಿನಂದನೆಗಳು.
ಕಾಳಿಹುಂಡಿ ಶಿವಕುಮಾರ್ ಮೈಸೂರು.