ಚಾಮರಾಜನಗರ, ಫೆಬ್ರವರಿ 03 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್. ಕೃಷ್ಣ ಅವರು ಜಿಲ್ಲೆಗೆ ಭೇಟಿ ನೀಡಿ ಇಂದು ಆಸ್ಪತ್ರೆ, ಅಂಗನವಾಡಿ, ಹಾಸ್ಟೆಲ್, ನ್ಯಾಯಬೆಲೆ ಅಂಗಡಿ, ರೈತ ಸಂಪರ್ಕ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ಬೋದನಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮೂಳೆ ಮತ್ತು ಕೀಲು ವಿಭಾಗದ ಒಳ ರೋಗಿಗಳ ವಾರ್ಡ್ ವೀಕ್ಷಿಸಿದರು. ಅಲ್ಲಿ ಹಾಕಲಾಗಿದ್ದ ಊಟ ಉಪಹಾರದ ಮೆನು ಪರಿಶೀಲಿಸಿದರು. ಸಣ್ಣದಾಗಿ ಬರೆಯಲಾಗಿದ್ದ ಮೆನು ಫಲಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು ಆಸ್ಪತ್ರೆಯ ಪ್ರತಿ ವಾರ್ಡಿನಲ್ಲಿ ಎದ್ದು ಕಾಣುವಂತೆ ಆಹಾರದ ಮೆನು ಚಾರ್ಟ್ ಪ್ರದರ್ಶಿಸಲು ಸೂಚಿಸಿದರು.
ಇದೇ ವೇಳೆ ರೋಗಿಗಳಿಗೆ ವಿತರಿಸಲು ವಾರ್ಡಿಗೆ ತರಲಾದ ಮಧ್ಯಾಹ್ನದ ಊಟವನ್ನು ಪರಿಶೀಲಿಸಿದರು. ಅನ್ನ, ಸಾಂಬರ್, ಚಪಾತಿ, ಸಾಗು ಇನ್ನಿತರ ಆಹಾರಗಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಊಟದ ಸ್ಯಾಂಪಲ್ ಪಡೆದು ವೈಜ್ಞಾನಿಕವಾಗಿ ಗುಣಮಟ್ಟ ಪರೀಕ್ಷಿಸಲು ನಿರ್ದೇಶನ ನೀಡಿದರು.
ವಾರ್ಡಿನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದ ಅಧ್ಯಕ್ಷರು ನಿಮಗೆ ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದಲ್ಲಿ ಆಹಾರ ವಿತರಣೆಯಾಗುತ್ತಿದ್ದೆಯೇ ಎಂದು ಪ್ರಶ್ನಿಸಿ ಉತ್ತರ ಪಡೆದುಕೊಂಡರು. ಬಳಿಕ ಇನ್ನಿತರ ವಿಭಾಗಗಳಿಗೂ ಭೇಟಿ ಕೊಟ್ಟರು. ಆಸ್ಪತ್ರೆಯ ಕಚೇರಿಯಲ್ಲಿ ಊಟ ಉಪಹಾರ ಸಂಬಂಧ ಲೆಕ್ಕಪತ್ರಗಳನ್ನು ಪರಿಶೀಲಿಸಿದರು. ರೋಗಿಗಳಿಗೆ ಅವರ ಬಳಿಯೇ ತೆರಳಿ ಊಟ ಉಪಹಾರ ನೀಡಬೇಕು. ಯಾವುದೇ ಕೊರತೆಗಳು ಆಗಬಾರದು. ಮೆನು ಪ್ರಕಾರವೇ ಊಟ ತಿಂಡಿ ಪೂರೈಸಬೇಕು ಎಂದು ತಿಳಿಸಿದರು.
ಬಳಿಕ ಹರದನಹಳ್ಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫಲಾನುಭವಿಗಳಿಗೆ ವಿತರಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಕೃಷಿ ಹೊಂಡ, ಕೃಷಿ ಪರಿಕರಗಳ ವಿತರಣೆಯ ಕಡತ ಪರಿಶೀಲಿಸಿ ಈಗಾಗಲೇ ಸೌಲಭ್ಯ ಪಡೆದುಕೊಂಡಿರುವ ಕೆಲವು ಫಲನುಭವಿಗಳಿಗೆ ಆಯೋಗದ ಅಧ್ಯಕ್ಷರೇ ಖುದ್ದು ದೂರವಾಣಿ ಮೂಲಕ ಮಾತನಾಡಿ ನಿಮಗೆ ಸೌಲಭ್ಯ ತಲುಪಿದೆಯೇ? ಸೌಲಭ್ಯ ಪಡೆದುಕೊಳ್ಳಲು ಏನಾದರೂ ಸಿಬ್ಬಂದಿಯಿಂದ ತೊಂದರೆಯಾಗಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು.
ರೈತ ಸಂಪರ್ಕ ಕೇಂದ್ರದಲ್ಲಿ ಎಷ್ಟು ಪ್ರಮಾಣದಲ್ಲಿ ಫಲಾನುಭವಿಗಳಿಗೆ ಪರಿಕರಗಳ ಬೇಡಿಕೆಯಿದೆ. ಹೇಗೆ ಪೂರೈಸಲಾಗುತ್ತಿದೆ ಎಂಬ ವಿವರ ಪಡೆದ ಅಧ್ಯಕ್ಷರು ಕಡತಗಳಲ್ಲಿ ದಾಖಲು ಮಾಡಿರುವ ಪ್ರಮಾಣಕ್ಕನುಗುಣವಾಗಿ ದಾಸ್ತಾನು ಇರುವ ಬಗ್ಗೆ ಪರಿಶೀಲಿಸಿದರು.
ತದನಂತರ ಬಂಡಿಗೆರೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು. ಆಹಾರ ತಯಾರಿಸುವ ಕೊಠಡಿ, ದಾಸ್ತಾನು ಮಾಡಲಾಗಿದ್ದ ಆಹಾರ ಸಾಮಗ್ರಿ, ಧಾನ್ಯಗಳು, ಇನ್ನಿತರ ಪರಿಕರಗಳನ್ನು ವೀಕ್ಷಿಸಿದರು. ಪೌಷ್ಠಿಕ ಆಹಾರ ಇನ್ನಿತರ ಸೌಲಭ್ಯಗಳಿಗೆ ನೊಂದಾಯಿಸಿರುವ ಗರ್ಭಿಣಿಯರು, ಬಾಣಂತಿಯರ ಮಾಹಿತಿ ಪಡೆದರು. ಕೆಲವು ಫಲಾನುಭವಿಗಳಿಗೆ ಅಧ್ಯಕ್ಷರೇ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಪಡೆದುಕೊಳ್ಳುತ್ತಿರುವ ಪೌಷ್ಠಿಕ ಆಹಾರದ ಬಗ್ಗೆ ವಿವರ ಪಡೆದುಕೊಂಡರು. ಆಹಾರ ವಿತರಣೆಯ ಕಡತವನ್ನು ಸರಿಯಾಗಿ ನಿರ್ವಹಿಸುವಂತೆ ಅಂಗನವಾಡಿ ಸಿಬ್ಬಂದಿಗೆ ತಾಕೀತು ಮಾಡಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಆಗಿಂದ್ದಾಗೆ ಭೇಟಿ ನೀಡಿ ಪರಿಶೀಲಿಸುವಂತೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್. ಕೃಷ್ಣ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ನಗರದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ಮಲ್ಲಯ್ಯನಪುರದ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲಿಸಿ ಈ ಸಂದರ್ಭದಲ್ಲಿ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದರು.
ಚಾಮರಾಜನಗರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಕಾಲೇಜು ವಿದ್ಯಾರ್ಥಿನಿಲಯಕ್ಕೂ ಭೇಟಿ ಕೊಟ್ಟು ಆಹಾರ ಸಾಮಗ್ರಿಗಳ ದಾಸ್ತಾನು, ಕ್ರೀಡಾ ಸಾಮಗ್ರಿಗಳ ವಹಿ, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿ ಪರಿಶೀಲಿಸಿದರು.
ಚಾಮರಾಜನಗರ ವೈದ್ಯಕೀಯ ಬೋದನಾ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಕೃಷಿ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕರಾದ ಸುಷ್ಮಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಡಾ. ವಸುಂಧರಾ ಹೆಗಡೆ, ತಹಶೀಲ್ದಾರ್ ಗಿರಿಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾ ಅಧಿಕಾರಿ ಮಂಜುಳಾ ದೇವಿ, ಆಹಾರ ಸುರಕ್ಷತಾ ಅಧಿಕಾರಿ ಶ್ರೀನಿವಾಸ್, ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾಗೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮೇಘ, ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
Like this:
Like Loading...
Related