ಬಿಸಿಲಿನ ತಾಪ ಹಿನ್ನೆಲೆ : ಹವಾಮಾನ ಇಲಾಖೆಯ ಸಲಹೆ ಅನುಸರಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ

ಚಾಮರಾಜನಗರ: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ ಹೆಚ್ಚಾಗುವ ಹಿನ್ನಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ) ಮತ್ತು ಹೀಟ್ ವೇವ್ ಸ್ಟೋಕ್‍ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ಹವಾಮಾನ ಇಲಾಖೆ (ಕೆಎಸ್‍ಎನ್‍ಡಿಎಂಸಿ) ನೀಡಿರುವ ಸಲಹೆಗಳನ್ನು ಅನುಸರಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿಳಿಸಿದೆ. 

ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಮನೆಯಿಂದ ಹೊರ ಹೋಗುವುದನ್ನು ಹಾಗೂ ಕೆಲಸ ಮಾಡುವುದನ್ನು ತಪ್ಪಿಸಬೇಕು. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಕೊಡೆ, ಟೋಪಿ, ಬೂಟುಗಳು ಅಥವಾ ಪಾದರಕ್ಷೆಗಳನ್ನು ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. 

ದೇಹವನ್ನು ನಿರ್ಜಲೀಕರಣಗೊಳಿಸುವ ಆಲೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಮತ್ತು ಹಳೆಯ ಆಹಾರವನ್ನು ಸೇವಿಸಬಾರದು. ರೈತರು, ಕೃಷಿ ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಹಾಗೂ ಇತರರು ಹೊರಗೆ ಕೆಲಸ ಮಾಡುವ ಸಂದರ್ಭದಲ್ಲಿ ಟೋಪಿ ಅಥವಾ ಕೊಡೆ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. 

ಮೂರ್ಛೆ ಅಥವಾ ಅನಾರೋಗ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಒಆರ್‍ಎಸ್, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಅಕ್ಕಿ ನೀರು, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸುವುದರಿಂದ ದೇಹವನ್ನು ಮರು-ಜಲೀಕರಣ ಮಾಡಲು ಸಹಾಯವಾಗಲಿದೆ. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು. ಮನೆಯನ್ನು ತಂಪಾಗಿ ಇರಿಸಿ, ಪರದೆಗಳು, ಶಟರ್‍ಗಳು ಅಥವಾ ಸನ್‍ಶೇಡ್‍ಗಳನ್ನು ಬಳಸಬೇಕು. ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಬೇಕು. ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಮತ್ತು ತಣ್ಣೀರಿನಲ್ಲಿ ಸ್ನಾನ ಮಾಡಬೇಕು.

ಸನ್‍ಸ್ಟ್ರೋಕ್ ಪೀಡಿತ ವ್ಯಕ್ತಿಗಳನ್ನು ತಂಪಾದ ಸ್ಥಳದಲ್ಲಿ, ನೆರಳಿನ ಕೆಳಗೆ ಇರಿಸಬೇಕು. ಅವರನ್ನು ಒಮ್ಮೆ ಬಟ್ಟೆಯಿಂದ ಒರೆಸಿ/ಆಗಾಗ ದೇಹವನ್ನು ತೊಳೆಯಬೇಕು. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಬೇಕು. ದೇಹದ ಉಷ್ಣತೆಯನ್ನು ಕಡಿಮೆ ಮಾಡಬೇಕು. ಒಆರ್‍ಎಸ್ ಕುಡಿಯಲು ಅಥವಾ ನಿಂಬೆ ಷರಬತ್/ತೋರಣಿ ಅಥವಾ ದೇಹವನ್ನು ಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಬೇಕು. ತಕ್ಷಣ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಬೇಕು. ಏಕೆಂದರೆ ಶಾಖದ ಹೊಡೆತಗಳು ಮಾರಣಾಂತಿಕವಾಗಬಹುದು.

ಸಾರ್ವಜನಿಕರು ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬಂದವರ ದೇಹವು ಶಾಖಕ್ಕೆ ಒಗ್ಗಿಕೊಳ್ಳುವವರೆಗೆ ಅವರು ಒಂದು ವಾರದವರೆಗೆ ತೆರೆದ ಮೈದಾನದಲ್ಲಿ ಚಲಿಸಬಾರದು. ಸಾಕಷ್ಟು ನೀರು ಕುಡಿಯಬೇಕು. ಶಾಖ ತರಂಗದ ಸಮಯದಲ್ಲಿ ಬಿಸಿ ವಾತಾವರಣಕ್ಕೆ ಕ್ರಮೇಣ ಒಡ್ಡಿಕೊಳ್ಳುವುದರಿಂದ ಒಗ್ಗಿಕೊಳ್ಳುವಿಕೆಯನ್ನು ಸಾಧಿಸಲಾಗುತ್ತದೆ.

ಪ್ರಯಾಣಿಕರು ಪ್ರಯಾಣಿಸುವಾಗ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕು. ಶಾಲಾ ಕಾಲೇಜುಗಳ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆ ಸಮಯದಲ್ಲಿ ವಿದ್ಯಾರ್ಥಿಗಳು ಬ್ಲೇಜರ್ ಧರಿಸುವುದನ್ನು ಕಡ್ಡಾಯಗೊಳಿಸುವಂತಿಲ್ಲ. 

ಬಿಸಿಗಾಳಿ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರÀಬೇಕು. ನೇರ ಬಿಸಿಲು, ಬಿಸಿಗಾಳಿಗೆ ಒಡ್ಡಿಕೊಳ್ಳಬಾರದು, ಕಪ್ಪು ಗಾಡ ಬಣ್ಣದ ತೆಳುವಾದ ಹಾಗೂ ಸಿಂಥಟಿಕ್ ಉಡುಪುಗಳನ್ನು ಧರಿಸಬಾರದು. ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬಾರದು. ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು. ವಾಸವಿರುವ ಕೋಣೆಯನ್ನು ತಂಪಾಗಿರಿಸಬೇಕು. ಕೋಣೆಗೆ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಬೇಕು. ಬಿಸಿಗಾಳಿ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ನೀಡಬೇಕು ಹಾಗೂ ಬಿಸಿಗಾಳಿ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ ದ್ರವ ಆಹಾರ ನೀಡಬೇಕು. ಚಹಾ, ಕಾಫಿ ಮತ್ತು ಜೇನು ನೀಡಬಾರದು.

ತುರ್ತು ಸೇವೆಗೆ ಶುಲ್ಕ ರಹಿತ ದೂ.ಸಂ 1077 ಹಾಗೂ ದೂ.ಸಂ 08226-223160/61/63 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *