ವಿದ್ಯುತ್ ಸುರಕ್ಷತಾ ಅರಿವು ಸಪ್ತಾಹ ಕಾರ್ಯಕ್ರಮ

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಶಾಖೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹರದನಹಳ್ಳಿ ಉಪವಿಭಾಗದಿಂದ ಗುರುವಾರ ವಿದ್ಯುತ್ ಸುರಕ್ಷತಾ ಅರಿವು ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಹರದನಹಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೃಪದ್ ಚಾಲನೆ ನೀಡಿ ಮಾತನಾಡಿದರು.

ಪುಣಜನೂರು ಮತ್ತು ಅರಕಲವಾಡಿ ಆನೆ ಕಾರಿಡಾರ್ ಪ್ರದೇಶದಲ್ಲಿ ಎಲ್‍ಟಿಎಸ್ ಕಂಬಗಳ ಲೇನ್‍ಗಳನ್ನು 8 ಮೀಟರ್‍ನಿಂದ 9 ಮೀಟರ್‍ಗೆ ಎತ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸೆಸ್ಕ್ ವ್ಯಾಪ್ತಿಯಲ್ಲಿ ಸಾರ್ವನಿಕರ ಕುಂದುಕೊರತೆ, ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಫೆ.2 ರಿಂದ 9ರವರೆಗೆ ವಿದ್ಯುತ್ ಸುರಕ್ಷತಾ ಅರಿವು ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರಿ ಜಾಗಗಳಲ್ಲಿ ಸೋಲಾರ್ ಫ್ಲಾಂಟ್ ನಿರ್ಮಾಣ ಮಾಡುವ ಮೂಲಕ ವಿದ್ಯುತ್ ಉತ್ಪಾದಿಸಿ, ರೈತರು ಹಾಗೂ ಗ್ರಾಹಕರಿಗೆ ವಿದ್ಯುತ್ ನೀಡಲಾಗುವುದು. ಹರದನಹಳ್ಳಿ ವ್ಯಾಪ್ತಿಯಲ್ಲಿ ಮಾದರಿ ಗ್ರಾಮ ಯೋಜನೆಯಡಿ ಕಂಬ, ಟಿಸಿ, ವೈರ್‍ಗಳನ್ನು ಬದಲಿಸಲಾಗುವುದು.

ಗ್ರಾಹಕರು ವಿದ್ಯುತ್ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳುವಂತೆ ತಿಳಿಸಿದರು.

ಸರ್ಕಾರದಿಂದ ಹಲವಾರು ಯೋಜನೆಗಳಿವೆ. ಅದನ್ನು ಸದುಪಯೋಗಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಎಇ ಪ್ರದೀಪ್, ಹಿರಿಯ ಸಹಾಯಕ ಮಹದೇವಸ್ವಾಮಿ, ಜೆಇ ವಸಂತ್‍ಕುಮಾರ್, ದೊಡ್ಡಮೋಳೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ನಿರ್ಮಲಾ ರಂಗನಾಥ್, ಪಿಡಿಓ ಸೀಮಾ, ಪ್ರಾಥಮಿಕ ವಿದ್ಯುತ್ ಸಮಿತಿ ಅಧ್ಯಕ್ಷ ಕಾರ್ಯದರ್ಶಿ ಚನ್ನಂಜ, ರೈತ ಮುಖಂಡ ಪುಟ್ಟಣ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *