ಗ್ರಾಹಕರ ರಕ್ಷಣೆ, ಸಬಲೀಕರಣಕ್ಕಾಗಿ ಗ್ರಾಹಕ ಹಕ್ಕುಗಳ ಕಾಯ್ದೆ ಜಾರಿ : ನ್ಯಾಯಾಧೀಶ ಎಂ.ಶ್ರೀಧರ

ಚಾಮರಾಜನಗರ: ಗ್ರಾಹಕರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಮತ್ತು ನಾಗರಿಕ ಸರಬ ರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರವು 1986ರಲ್ಲಿ ಗ್ರಾಹಕ ಹಕ್ಕುಗಳ ಕಾಯ್ದೆ ಜಾರಿಗೊಳಿಸಿದೆ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರು ಗ್ರಾಹಕರಾಗಿದ್ದಾರೆ. ಗ್ರಾಹಕರಿಗೆ ನ್ಯಾಯಯುತ, ಯೋಗ್ಯ ಹಾಗೂ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನೀಡುವ ಜವಾಬ್ದಾರಿ ವ್ಯಾಪಾರಸ್ಥರದ್ದು. ಯಾವುದೇ ವಸ್ತುಗಳನ್ನು ಕೊಡುವವನ ತೃಪ್ತಿಗಾಗಿ ಕೊಳ್ಳುವುದಲ್ಲ, ಅಲ್ಲಿ ಗ್ರಾಹಕರ ಸಂತೃಪ್ತಿಯೇ ಪ್ರಮುಖವಾಗಿದೆ. ಸುರಕ್ಷತೆ, ಆಯ್ಕೆ ಹಾಗೂ ಆರೋಗ್ಯಪೂರ್ಣ ಪರಿಸರ ಹೊಂದುವ ಹಕ್ಕನ್ನು ಕಾಯ್ದೆಯು ಎಲ್ಲಾ ಗ್ರಾಹಕರಿಗೂ ನೀಡಿದೆ ಎಂದರು.

ವ್ಯಾಪಾರಸ್ಥರು ವಸ್ತುಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ದರ ಪಡೆಯುವಂತಿಲ್ಲ. ವಸ್ತುಗಳು ದೋಷದಿಂದ ಕೂಡಿದ್ದರೆ ಪ್ರಶ್ನೆ ಮಾಡುವ ಹಕ್ಕು ಗ್ರಾಹಕರಿಗಿದೆ. ಅವಧಿ ಮೀರಿದ ಉತ್ಪನ್ನಗಳನ್ನು ನೀಡಿದರೆ ಅಂತಹವರ ಮೇಲೆ ಗ್ರಾಹಕರ ಆಯೋಗದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದು. ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ 50 ಲಕ್ಷದವರೆಗೆ ಹಾಗೂ ರಾಜ್ಯ ಆಯೋಗದಲ್ಲಿ 1 ಕೋಟಿಯವರೆಗೆ ಪರಿಹಾರ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳನ್ನು ಅರಿಯಬೇಕು ಎಂದು ನ್ಯಾಯಾಧೀಶರಾದ ಶ್ರೀಧರ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ, ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಅವರು ಗ್ರಾಹಕರ ಹಕ್ಕುಗಳ ಜಾಗೃತಿ ಎಲ್ಲರಿಗೂ ಅಗತ್ಯವಾಗಿದೆ. ಅದರಲ್ಲೂ ಕುಟುಂಬ ನಿರ್ವಹಿಸುವ ಮಹಿಳೆಯರಿಗೆ ಅತ್ಯಗತ್ಯವಾಗಿದೆ. ವಸ್ತು ಗಳನ್ನು ಕೊಳ್ಳುವಾಗ ತೂಕ, ಅಳತೆ ಮತ್ತು ದರ ಕ್ರಮಬದ್ದ ವಾಗಿರಬೇಕು. ಗ್ರಾಹಕರು ಅದನ್ನು ಪರೀಕ್ಷಿಸಿ ಪಡೆದುಕೊಳ್ಳಬೇಕೇ ಹೊರತು ಮೋಸ ಹೋಗಬಾರದು ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ಜಿಲ್ಲೆಯಲ್ಲಿ ಮತದಾನರನ್ನು ಆಕರ್ಷಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಪ್ರತಿ ತಾಲೂಕಿಗೆ ತಲಾ 2 ಸಖೀ ಸೌರಭ ಮತಗಟ್ಟೆ, ಜಾನಪದ ಕಲಾ ಶೈಲಿಯ ಮತಗಟ್ಟೆ, ಅರಣ್ಯದ ಮಹತ್ವ ತಿಳಿಸುವ ಹಸಿರು ಮತಗಟ್ಟೆ ಹಾಗೂ ರೈತರನ್ನು ಸೆಳೆಯಲು ಅನ್ನದಾತರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಲಕ್ಷ್ಮೀ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾದ ಎಂ.ವಿ. ಭಾರತಿ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಸಾಕಷ್ಟು ಜನರು ವ್ಯಾಪಾರಕ್ಕಾಗಿ ಆನ್‍ಲೈನ್ ಮೊರೆ ಹೋಗುತ್ತಿರುವುದನ್ನು ಕಾಣಬಹುದು. ಅಂಗಡಿಗಳಿಂದ ವಸ್ತುಗಳನ್ನು ಕೊಳ್ಳುವುದಷ್ಟೇ ಅಲ್ಲ. ಬ್ಯಾಂಕಿಂಗ್ ಹಾಗೂ ವಿಮಾ ಸೌಲಭ್ಯಗಳನ್ನು ಪಡೆಯುವಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಈ ಬಾರಿಯ ಗ್ರಾಹಕರ ದಿನವನ್ನು ‘ಗ್ರಾಹಕರಿಗಾಗಿ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು. ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಸದಸ್ಯರಾದ ಕೆ.ಎಸ್. ರಾಜು ಅವರು ಕಾರ್ಯಕ್ರಮದಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಪಿ. ಸವಿತಾ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಬಿ.ಎನ್. ರಾಜೀವ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರಾದ ಬಾಲಕೃಷ್ಣ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಸಂಯೋಜಕರು ಹಾಗೂ ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘದ ಶಿವರಾಜಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *