ಗೌರವಯುತ ಜೀವನ ನಡೆಸಲು ಮಾನವ ಹಕ್ಕುಗಳ ಜಾರಿ : ನ್ಯಾಯಾಧೀಶ ಈಶ್ವರ

ಚಾಮರಾಜನಗರ: ಶಾಂತಿ, ಸೌಹಾರ್ದ, ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸಲು ಜೀವಿಸಲು ಮಾನವ ಹಕ್ಕುಗಳನ್ನು ಜಾರಿಗೆ ತರಲಾಯಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡನೇ ಜಾಗತಿಕ ಮಹಾಯುದ್ಧದ ನಂತರ ವಿಶ್ವದೆಲ್ಲೆಡೆ ಶಾಂತಿ ನೆಲೆಸಲು 1948ರ ಡಿಸೆಂಬರ್ 10ರಂದು ವಿಶ್ವ ಸಂಸ್ಥೆಯು ಮಾನವ ಹಕ್ಕುಗಳನ್ನು ಘೋಷಿಸಿತು. ವಿಶ್ವದೆಲ್ಲೆಡೆ ಸ್ನೇಹಭಾಂದವ್ಯ ಬೆಳೆಸಿ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಬದುಕುವ, ಸಮಾನತೆ, ಭದ್ರತೆ, ಧಾರ್ಮಿಕ, ವ್ಯಕ್ತಿ, ಇನ್ನಿತರ ಸ್ವಾತಂತ್ರ್ಯ ಹಕ್ಕುಗಳನ್ನು ಜಾರಿಗೊಳಿಸಲಾಯಿತು ಎಂದು ತಿಳಿಸಿದರು.

ಸ್ವಾತಂತ್ರದ ನಂತರ ಪ್ರಜಾಪ್ರಭುತ್ವ ಸರ್ಕಾರ ರಚನೆ ಮಾಡಲು ಕಾನೂನುಗಳ ಅಗತ್ಯವಿತ್ತು. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಡಕಗೊಳಿಸಲಾಗಿದೆ. ಹಾಗೆಯೇ ನಾಗರಿಕರು ಕರ್ತವ್ಯಗಳನ್ನು ಪಾಲನೆ ಮಾಡಬೇಕಿದೆ. ಯಾವುದೇ ಹೊಸ ಕಾನೂನುಗಳು ರೂಪುಗೊಳ್ಳುವ ಮೊದಲು ಭಾರತ ಸಂವಿಧಾನದ ಮೂಲಭೂತ ಹಕ್ಕುಗಳ ಕಾನೂನಿನಡಿ ಹಕ್ಕು ಹಾಗೂ ಕರ್ತವ್ಯಗಳನ್ನು ನಿರ್ಣಯಿಸಲಾಗುತ್ತದೆನ ಎಂದರು. 

ಮಾನವ ಹಕ್ಕುಗಳನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ. ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದವರು ಅಥವಾ ಅವರ ಪರವಾಗಿ ಯಾರಾದರೂ ಕುಂದು ಕೊರತೆ ಪರಿಹರಿಸಿಕೊಳ್ಳಲು, ನ್ಯಾಯ ದೊರಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗವನ್ನು ಸಂಪಕಿಸಬಹುದು.  ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು. 

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾನವ ಹಕ್ಕುಗಳ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಾದ ಶೃತಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *