ಚಾಮರಾಜನಗರ: ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ಪ್ರತಿಯೊಬ್ಬರಿಗೂ ತಾಳ್ಮೆ ಅವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ಅಭಿಪ್ರಾಯಪಟ್ಟರು.
ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಅವಸರವೇ ಅಪಘಾತಕ್ಕೆ ಕಾರಣವಾಗಿದೆ. ಸಂಚಾರಿ ನಿಯಮಗಳ ಪಾಲನೆ, ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆ ಉದ್ದೇಶದಿಂದ ಸಾರ್ವಜನಿಕವಾಗಿ ರಸ್ತೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ತಪ್ಪಿದಲ್ಲಿ ಅಪಘಾತಗಳಾಗುವ ಸಂಭವ ಅಧಿಕವಾಗಿರುತ್ತದೆ. ಇತ್ತೀಚೆಗೆ ವಾಹನಗಳು ಹೆಚ್ಚಾಗುತ್ತಿರುವುದರಿಂದ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ವಾಹನ ಚಲಾಯಿಸುವ ಪ್ರತಿಯೊಬ್ಬರು ಸಂಚಾರಿ ನಿಯಮಗಳ ಬಗ್ಗೆ ಅರಿವು ಹೊಂದಬೇಕು. ವಾಹನ ಚಾಲನೆಯಲ್ಲಿ ತಾಳ್ಮೆ ಅಗತ್ಯವಾಗಿದೆ. ಇದರಿಂದ ಅಪಘಾತಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳು, ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ಪ್ರತಿವರ್ಷ ಜನವರಿ ಮಾಸಾಂತ್ಯದವರೆಗೂ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಪೂರ್ಣ ಅರಿವು ಮೂಡಿಸಲಾಗುತ್ತಿದೆ. ವಾಹನ ಚಲಾಯಿಸುವವರು ಸಂಬಂಧಿಸಿದ ಚಾಲ್ತಿಯಲ್ಲಿರುವ (ಆರ್.ಸಿ, ಡಿ.ಎಲ್, ಇನ್ಷ್ಯೂರೆನ್ಸ್) ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಸುರಕ್ಷತಾ ಕವಚ (ಹೆಲ್ಮೆಟ್) ಧರಿಸಿರಬೇಕು. ಇಂದಿನ ಮಕ್ಕಳು, ಯುವಕರು ಭವಿಷ್ಯದ ಪ್ರಜೆಗಳು ಹಾಗೂ ದೇಶದ ಆಸ್ತಿಯಾಗಿದ್ದಾರೆ. ಮಕ್ಕಳು ವಿದ್ಯಾರ್ಥಿದೆಸೆಯಲ್ಲಿಯೇ ಕಾನೂನು ಅರಿವು ಪಡೆದು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಅವರು ರಸ್ತೆ ಅಪಘಾತಗಳ ಪರಿಣಾಮಕಾರಿ ತಡೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಶಾಲಾ-ಕಾಲೇಜು, ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ ವ್ಯಾಪಕ ಜನಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಯಕ್ರಮವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಂಚಾರಿ ನಿಯಮಗಳನ್ನು ನಾಗರಿಕರು ಕಡ್ಡಾಯವಾಗಿ ಪಾಲಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕಿ ರಶ್ಮಿ ಅವರು ರಸ್ತೆ ಸುರಕ್ಷತೆಯ ಸಂಚಾರಿ ನಿಯಮಗಳು, ಮುನ್ನಚ್ಚರಿಕೆ ರಸ್ತೆ ಚಿಹ್ನೆಗಳು, ಕಡ್ಡಾಯ ರಸ್ತೆ ಚಿಹ್ನೆಗಳು ಮತ್ತು ಮಾಹಿತಿ ರಸ್ತೆ ಚಿಹ್ನೆಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ರಸ್ತೆ ಸುರಕ್ಷತೆಯ ತಿಳಿವಳಿಕೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕರಾದ ಕಮರಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.