ಚಾಮರಾಜನಗರ: ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ ಎಂದು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನಸಾಮಾನ್ಯರು ಪ್ರತಿನಿತ್ಯ ತಮ್ಮ ಮನೆಯ ಒಳಗೆ ಹಾಗೂ ಹೊರ ಆವರಣದಲ್ಲಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಚತೆ ಬಗ್ಗೆ ತಾವು ಅರಿತು ಇತರರಿಗೂ ತಿಳಿ ಹೇಳಬೇಕು. ಆ ಮೂಲಕ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಭಾರತಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ಮಾತನಾಡಿ ನಾವು ವಾಸಿಸುವ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಇದರಿಂದ ನಮ್ಮ ಆರೋಗ್ಯವೂ ಚೆನ್ನಾಗಿ ಇರುತ್ತದೆ ಹಾಗೂ ಉತ್ತಮ ಗಾಳಿ, ಬೆಳಕು ನಮಗೆ ದೊರಕುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಜೆ ಕೃಷ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಎಸ್ ಹೊನ್ನಸ್ವಾಮಿ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿವೇದಿತ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್. ನಂಜಯ್ಯ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಇತರರು ಈ ಸಂದರ್ಭದಲ್ಲಿ ಇದ್ದರು. ಇದೇ ವೇಳೆ ಗಣ್ಯರು ನ್ಯಾಯಾಲಯದ ಆವರಣದಲ್ಲಿ ಶ್ರಮದಾನ ಮಾಡಿದರು.