
ಚಾಮರಾಜನಗರ: ಆಯುರ್ವೇದವನ್ನು ಉತ್ತೇಜಿಸುವ ಮೂಲಕ ಪ್ರತಿಯೊಬ್ಬರು ಉತ್ತಮ ಆಹಾರ ಪದ್ದತಿ, ಹವ್ಯಾಸ, ಯೋಗ, ಧ್ಯಾನ, ಇತರೆ ವಿಧಾನಗಳಿಂದ ಒತ್ತಡರಹಿತ ಜೀವನಶೈಲಿ ಆಳವಡಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಎಸ್.ಬಿ.ಐ. ಬ್ಯಾಂಕ್ ಮೇಲ್ಭಾಗದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ‘ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುವೇದ’ ಘೋಷವಾಕ್ಯದಡಿ ಆಯೋಜಿಸಲಾಗಿದ್ದ “10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತಿನಾಧ್ಯಂತ ಇಂದು ಎಷ್ಟೇ ಔಷಧಿಗಳನ್ನು ಕಂಡುಹಿಡಿದಿದ್ದರೂ ಅದರ ಮೂಲ ಆಯುರ್ವೇದ ಗುಣವುಳ್ಳ ಗಿಡಮೂಲಿಕೆಗಳೇ ಆಗಿವೆ. ಗಿಡಮೂಲಿಕೆ ಔಷಧಗಳಿಗೆ ಸಾಹಿತ್ಯರೂಪ ನೀಡಿದವರು ಧನ್ವಂತರಿಯವರು. ಆಯುರ್ವೇದ ಔಷಧಗಳಿಂದ ಕಾಯಿಲೆ ಬೇಗನೇ ಗುಣವಾಗುವುದಿಲ್ಲ. ನಿಜ, ಆದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದು ಅಷ್ಟೇ ಸತ್ಯವಾಗಿದೆ. ಬದಲಾದ ತಂತ್ರಜ್ಞಾನ ಯುಗದಲ್ಲಿ ಯಾವುದೇ ಕಾಯಿಲೆ ಬೇಗ ವಾಸಿಯಾಗಬೇಕು ಎನ್ನುವ ಮನೋಭಾವ ಜನರಲ್ಲಿದೆ. ಅದು ಬದಲಾಗಬೇಕು ಎಂದರು.
ಶೇ. 90ರಷ್ಟು ಮಂದಿ ಇಂಗ್ಲೀಷ್ ಔಷಧಿಗೆ ಮೊರೆಹೋಗಿರುವುದರಿಂದ ಆಯುರ್ವೇದದ ಮನೆಮದ್ದಿಗೆ ಮೌಲ್ಯ ಕಡಿಮೆಯಾಗಿದೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಯಾವುದೇ ವ್ಯಕ್ತಿ ಒಂದಲ್ಲಾ ಒಂದು ಒತ್ತಡಕ್ಕೆ ಸಿಲುಕಿರುವುದು ಕಂಡುಬಂದಿದೆ. ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ. ಪ್ರತಿದಿನ ಮನಸ್ಸನ್ನು ಕೇಂದ್ರಿಕರಿಸುವ 10-15 ನಿಮಿಷಗಳ ಯೋಗಭ್ಯಾಸ, ಧ್ಯಾನ, ಸೂರ್ಯನಮಸ್ಕಾರ ಮಾಡುವುದರಿಂದ ಸಾಕಷ್ಟು ಒತ್ತಡದಿಂದ ಮುಕ್ತರಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಆಯುರ್ವೇದದ ಮಹತ್ವ ಅರಿತು ಜಾಗೃತರಾಗಬೇಕು ಎಂದು ಹೇಳಿದರು.
ಒತ್ತಡರಹಿತ ಸುಸ್ಥಿರ ಜೀವನ ರೂಪಿಸಿಕೊಳ್ಳಲು ಬೇಕಾದ ಪರಿಹಾರಗಳನ್ನು ಕಂಡುಕೊಳ್ಳಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು ಯಾವುದೇ ಒತ್ತಡಗಳಿರಲಿ, ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಾರದು, ಆಯುರ್ವೇದದ ಬಗ್ಗೆ ಸಾಕಷ್ಟು ಜನಜಾಗೃತಿ ಮೂಡಿಸುವ ಅವಶ್ಯವಿದೆ. ಆಯುರ್ವೇದದ ಸಂಪೂರ್ಣ ಅರಿವು ಹೊಂದಬೇಕು. ಆಯುರ್ವೇದ ಪ್ರಾಮುಖ್ಯತೆಯನ್ನು ಎಲ್ಲೆಡೆ ಪಸರಿಸಿ ಇತರರಿಗೂ ಜಾಗೃತಿ ಮೂಡಿಸಬೇಕು. ಆಯುರ್ವೇದದಿಂದಾಗುವ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಹೇಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರ ಅವರು ತಿಳಿಸಿದರು.
ಆರಂಭದಲ್ಲಿ ನಗರಸಭಾ ಸದಸ್ಯರಾದ ಕಲಾವತಿ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಆಯುರ್ವೇದ ದಿನಾಚರಣೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಲೀಲಾವತಿ ಅವರು ಆಯುರ್ವೇದವನ್ನು ಮುಖ್ಯವಾಹಿನಿಗೆ ತಂದು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಆಯುರ್ವೇದದ ಕುರಿತು ಹೆಚ್ಚು ಅರಿವು ಮೂಡಿಸಿ ಪ್ರಚಲಿತಗೊಳಿಸಲು ಸರ್ಕಾರದ ವತಿಯಿಂದ 2016ರಿಂದ ಪ್ರತಿವರ್ಷ ಸೆಪ್ಟೆಂಬರ್ 23ರಂದು ಆಯುವೇದ ದಿನ ಆಚರಿಸಲಾಗುತ್ತದೆ. ಆಯುರ್ವೇದದ ಅಧಿದೇವತೆ ಧನ್ವಂತರಿಯವರು ಆಯುರ್ವೇದಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಆಯುರ್ವೇದವನ್ನು ವಿಶ್ವಕ್ಕೆ ಭಾರತ ಪರಿಚಯಿಸಿದೆ. ಜಗತ್ತನ್ನು ಆಯುರ್ವೇದದ ಮೂಲಕ ಆರೋಗ್ಯಪೂರ್ಣವಾಗಿಸುವ ಸದುದ್ದೇಶದಿಂದ ಆಯುರ್ವೇದ ದಿನಾಚರಣೆಯನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಪಿ. ಸತೀಶ್‍ಕುಮಾರ್, ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುನೀತ್‍ಬಾಬು, ವಿವಿಧ ಶಾಲಾ ಕಾಲೇಜು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.