- ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ, ನವೆಂಬರ್ 15 (ಕರ್ನಾಟಕ ವಾರ್ತೆ):- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿಂದು ಆಯೋಜಿಸಲಾಗಿದ್ದ ರಾಜ್ಯದ ಐತಿಹಾಸಿಕ ಪಾರಂಪರಿಕ ಕೋಟೆಗಳು ಹಾಗೂ ಏಳು ಅದ್ಬುತ ತಾಣಗಳ ಮಾದರಿ ವಸ್ತುಪ್ರದರ್ಶನವನ್ನು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಕರ್ನಾಟಕದ ಐತಿಹಾಸಿಕ ಪಾರಪರಿಕ ಕೋಟೆಗಳು ಹಾಗೂ ಏಳು ಅದ್ಭುತ ಪುರಾತನ ತಾಣಗಳ ಮಾದರಿಗಳ ವಸ್ತು ಪ್ರದರ್ಶನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ವಸ್ತುಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಯಾವುದೇ ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ. ನಮ್ಮ ಕಣ್ಣುಂದೆ ಅದ್ಬುತವಾದಂತಹ ಐತಿಹಾಸಿಕ ಮಾದರಿಯ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವುದು ಸಂತಸದ ವಿಚಾರವಾಗಿದೆ. ವಸ್ತು ಪ್ರದರ್ಶನದ ಮಾದರಿ ತಯಾರಿಸಿದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ ಎಂದು ಹಾರೈಸಿದರು.
ನಾವು ಬಾಲ್ಯದಲ್ಲಿ ಚಿತ್ರಗಳಲ್ಲಿ ನೋಡಿದ್ದ ಈಜಿಪ್ಟ್‍ನ ಪಿರಮಿಡ್‍ಗಳು, ಪ್ರಪಂಚದ ಅದ್ಬುತಗಳಂತಹ ಚೀನಾದ ಮಹಾಗೋಡೆ, ತೂಗುವ ಉದ್ಯಾನವನ, ಆಗ್ರಾದ ತಾಜ್ ಮಹಲ್, ಮೈಸೂರು ಅರಮನೆ, ಜೋಗ್ ಜಲಪಾತದಂತಹ ಅದ್ಬುತವಾದ ಪ್ರಮುಖ ಐತಿಹಾಸಿಕ ಪಾರಂಪರಿಕ ಕೋಟೆಗಳು, ಪುರಾತನ ತಾಣಗಳನ್ನು ಮರೆಸುವಂತಿರುವ ಮಾದರಿಗಳ ತಯಾರಿಕೆ ಹಾಗೂ ಪಾರಂಪರಿಕ ತಾಣಗಳ ಜಾಗೃತಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿದೆ ಎಂದರು.
ಕಳೆದ 7 ವರ್ಷಗಳ ಹಿಂದೆ 35 ವಿದ್ಯಾರ್ಥಿಗಳಿಂದ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಾದರಿಯಾಗಿ ಬೆಳೆವಣಿಗೆ ಹೊಂದಿದೆ. ಈಗಾಗಲೆ ಸಿಎಸ್‍ಆರ್ ನಿಧಿ ಅನುದಾನ ನೀಡಲಾಗಿದೆ. ಅಲ್ಲದೇ ವೆಂಕಟಯ್ಯಛತ್ರ, ಹರದನಹಳ್ಳಿ, ಚಂದಕವಾಡಿ ಕಾಲೇಜುಗಳಿಗೂ ಅನುದಾನ ನೀಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸ ಪಡೆದು ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನು ಪಡೆಯಲಿ ಎಂದು ಸಲಹೆ ನೀಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ.ಆರ್. ಗಂಗಾಧರ್ ಅವರು ಮಾತನಾಡಿ ವಿಜ್ಞಾನ ವಿಭಾಗದಲ್ಲಿ ವಸ್ತು ಪ್ರದರ್ಶನಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ. ಆದರೆ ಇತಿಹಾಸ ವಿಭಾಗದಲ್ಲಿ ವಸ್ತು ಪ್ರದರ್ಶನ ಮಾಡಿರುವುದು ಸಂತಸದ ವಿಷಯವಾಗಿದೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಲು ಇಂತಹ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ. ದೇಶದಲ್ಲಿ ಅನೇಕ ಐತಿಹಾಸಿಕ ಸ್ಥಾನಗಳು, ಪಾರಂಪರಿಕ ಕಟ್ಟಡಗಳಿವೆ ಇಂತಹ ವಸ್ತು ಪ್ರದರ್ಶನಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ಕೆ ರವಿಕುಮಾರ್, ಸಮೀಉಲ್ಲಾ, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಡಾ. ಎನ್.ಜಿ. ಪ್ರಕಾಶ್, ಪ್ರಾಂಶುಪಾಲರಾದ ಪ್ರೊ. ಬಿ.ಎಸ್ ಮಹದೇವಸ್ವಾಮಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜಯಣ್ಣ, ಉಪನ್ಯಾಸಕರಾದ ಎಂ. ರೋಹಿತ್, ಐ.ಕ್ಯು.ಎ.ಸಿ ಸಂಚಾಲಕರಾದ ಡಾ. ಲಿಖಿತ ಎಸ್ ಅನುರಾಧ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.