

ಚಾಮರಾಜನಗರ: ನೇತ್ರದಾನವು ಶ್ರೇಷ್ಠದಾನವಾಗಿದ್ದು, ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ತಿಳಿಸಿದರು.
ನಗರದ ಹೊರವಲಯದಲ್ಲಿರುವ ವೈದ್ಯಕೀಯ ವಿಜ್ಞಾನ (ಸಿಮ್ಸ್) ಸಂಸ್ಥೆಯಲ್ಲಿ ಇತ್ತೀಚೆಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ 40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಆರೋಗ್ಯ ಇಲಾಖೆ ವತಿಯಿಂದ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನವನ್ನು ಆಚರಿಸಲಾಗುತ್ತದೆ. ಪಾಕ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ನೇತ್ರದಾನದ ಮಹತ್ವದ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಮಾನವನ ದೇಹದಲ್ಲಿ ಕಣ್ಣು ಪ್ರಮುಖವಾದ ಅಂಗವಾಗಿದ್ದು, ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ತುಂಬಾ ಮುಖ್ಯವಾದ ಜ್ಞಾನೇಂದ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಣ್ಣಿನ ಸಮಸ್ಯೆ ಕಾಡುತ್ತಿದೆ. ವ್ಯಕ್ತಿ ಮರಣ ನಂತರ ಕಣ್ಣನ್ನು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆಯಬೇಕು ಎಂದರು.
ನೇತ್ರದಾನಿಗಳು ಮರಣ ಹೊಂದುವ ಮೊದಲು ತಮ್ಮ ಕುಟುಂಬದ ಸದಸ್ಯರು ಅಥವಾ ವಾರಸುದಾರರಿಗೆ ನೊಂದಾಯಿಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಬೇಕು. ಇದರಿಂದ ವ್ಯಕ್ತಿ ಮರಣ ಹೊಂದಿದ ನಂತರ ಕುಟುಂಬದವರು ನೇತ್ರದಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ಅನುಕೂಲವಾಗಲಿದೆ. ನೇತ್ರದಾನದಿಂದ ಇನ್ನೊಬ್ಬರು ದೃಷ್ಠಿ ಹೊಂದಲು ಸಹಾಯವಾಗುತ್ತದೆ. ಒಬ್ಬರು ಮಾಡುವ ನೇತ್ರದಾನ ಇಬ್ಬರು ಅಂಧರಿಗೆ ಬೆಳಕಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಮ್ಸ್ ಡೀನ್ ಮತ್ತು ನಿರ್ದೇಶಕರಾದ ಡಾ. ಮಂಜುನಾಥ್ ಅವರು ಮನುಷ್ಯನಿಗೆ ಕಣ್ಣಿನ ಪ್ರಾಮುಖ್ಯತೆ ಬಹಳ ಮುಖ್ಯವಾಗಿದ್ದು, ಪ್ರಕೃತಿ ಸೌಂದರ್ಯ ಸವಿಯಲು ಕಣ್ಣು ಬಹಳ ಮುಖ್ಯವಾದ ಅಂಗವಾಗಿದೆ. ನೇತ್ರದಾನ ಕುಟುಂಬದ ಸಂಪ್ರದಾಯವಾಗಬೇಕು. ಪ್ರತಿಯೊಬ್ಬರು ನೇತ್ರದಾನಕ್ಕೆ ನೊಂದಾಯಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಅಂಧರಿಗೆ ಕಣ್ಣಿನ ತೊಂದರೆಗಳನ್ನು ಆದಷ್ಟೂ ಬೇಗ ಗುರುತಿಸಿ ಸಲಹೆ, ಚಿಕಿತ್ಸೆಗಳನ್ನು ನೀಡುವ ಅಗತ್ಯವಿದೆ ಎಂದರು.
ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳಾದ ಡಾ. ಚಂದ್ರಶೇಖರ್ ಅವರು ನೇತ್ರದಾನಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿ.ಪಿ.ಟಿಯಲ್ಲಿ ಮಾಹಿತಿ ನೀಡಿ ಯಾವೊಬ್ಬ ವ್ಯಕ್ತಿಯು ಕುರುಡುತನ ಅನುಭವಿಸಬಾರದು. ಇತ್ತೀಚಿನ ದಿನಗಳಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಕಡಿಮೆಯಾಗಿ ಬೇಡಿಕೆ ಜಾಸ್ತಿಯಾಗಿದೆ. ನೇತ್ರಗಳು ಮಣ್ಣುಪಾಲು ಆಗುವ ಬದಲು ಅಂಧರ ಬಾಳಿಗೆ ಬೆಳಕಾಗಬೇಕು. ಕಣ್ಣುಗಳನ್ನು ದಾನ ಮಾಡಿ ಜೀವನವನ್ನು ಸಾರ್ಥಕತೆ ಪಡಿಸಿಕೊಳ್ಳೋಣ. ಎಲ್ಲರು ನೇತ್ರದಾನಕ್ಕೆ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ್, ಸಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಜಯ್, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಮಹೇಶ್, ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ್ವರ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.