ಚಾಮರಾಜನಗರ: ವಿಶ್ವಗುರು ಬಸವಣ್ಣನವರು ಸೇರಿದಂತೆ ಅನುಭವ ಮಂಟಪದ ಎಲ್ಲಾ ಶಿವಶರಣರು ರಚಿಸಿದ ಮೂಲ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ ಮುಂದಿನ ಪೀಳಿಗೆಗೆ ಪರಿಚಯಿಸಿ ಪಸರಿಸುವ ಮಹತ್ವಪೂರ್ಣ ಸಾಧನೆಗೈದ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಸರ್ವಕಾಲಕ್ಕೂ ಸ್ಮರಣೀಯಾರ್ಹರಾಗಿದ್ದರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮ ಹಾಗೂ ವಚನ ಸಂರಕ್ಷಣೆಯ ದಿನ ಕಾರ್ಯಕ್ರಮದ ದೀಪ ಬೆಳಗಿಸಿ, ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ಅವರು ಮಾತನಾಡಿದರು.
ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯ ತನ್ನದೇ ಆದ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. 12ನೇ ಶತಮಾನ ವಚನಸಾಹಿತ್ಯ ಚಳವಳಿಯ ಯುಗವಾಗಿದ್ದು, ಸಾಮಾಜಿಕ, ವೈಚಾರಿಕ ಹಾಗೂ ವೈಜ್ಞಾನಿಕವಾಗಿ ಹೊಸ ಸಮಾಜ ಕಟ್ಟಲು ನೆರವಾಯಿತು. ತಾಳೆಗರಿ, ಓಲೆಗರಿ, ಒಡ್ಡೋಲಗಳಲ್ಲಿ ಕೈಬರಹದಲ್ಲಿದ್ದ ವಚನಗಳನ್ನು ಸಂಗ್ರಹಿಸಿ, ಸಂಶೋಧನೆ ಮಾಡಿ, ಮುದ್ರಿಸಿ ಇಂದು ನಮ್ಮೆಲ್ಲರಿಗೂ ದೊರಕುವ ಕೆಲಸವನ್ನು ಹಳಕಟ್ಟಿಯವರು ಮಾಡಿದ್ದಾರೆ ಎಂದರು.
ವೃತ್ತಿಯಲ್ಲಿ ವಕೀಲರಾಗಿದ್ದರೂ ವಚನಗಳನ್ನು ಸಂಗ್ರಹಿಸುವ ಅಸಕ್ತಿ ಬೆಳೆಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಫ.ಗು. ಹಳಕಟ್ಟಿ ಅವರ ವ್ಯಕ್ತಿತ್ವ, ಪರಿಶ್ರಮ, ತ್ಯಾಗ ನಮಗೆ ಮಾದರಿಯಾಗಿದೆ. ಹಳಕಟ್ಟಿಯವರ ಸಾಧನೆಯನ್ನು ಸ್ಮರಿಸುವ ಸಲುವಾಗಿ ಸರ್ಕಾರ ಅವರ ಜಯಂತಿಯನ್ನು ಆಚರಿಸಿ ಅಭಿನಂದಿಸುವ ಕೆಲಸ ಮಾಡಿದೆ. ಅವರ ಹಾದಿಯಲ್ಲಿ ನಾವೆಲ್ಲರೂ ಮುನ್ನೆಡೆಯೋಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಋಗ್ವೇದಿ ಅವರು ಮಾತನಾಡಿ 1880ರ ಜುಲೈ 2ರಂದು ಹುಟ್ಟಿದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನವನ್ನು ವಚನ ಸಂರಕ್ಷಣೆಯ ದಿನವನ್ನಾಗಿ ಸರ್ಕಾರ ಆಚರಿಸುತ್ತಿದ್ದು, ಇದೊಂದು ಸ್ಪೂರ್ತಿದಾಯಕ ಕಾರ್ಯಕ್ರಮವಾಗಿದೆ. ನಮ್ಮ ಅಂತರಂಗ, ದಿವ್ಯಚೇತನವನ್ನು ಬಡಿದೆಬ್ಬಿಸಿದ ಕೀರ್ತಿ ವಚನಗಳಿಗೆ ಸಲ್ಲುತ್ತದೆ. ಮನುಷ್ಯನ ಜೀವನವನ್ನು ಪ್ರಜ್ಞಾಪೂರ್ವಕವಾಗಿ ಸಾತ್ವಿಕದೆಡೆಗೆ ಕೊಂಡೊಯ್ಯುವ ಶಕ್ತಿ ವಚನಗಳಿಗೆ ಇದೆ. ಇಂತಹ 22 ಸಾವಿರಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಮುದ್ರಿಸಿ ಮುಂದಿನ ತಲೆಮಾರಿಗೂ ಪಸರಿಸುವ ಕಾರ್ಯವನ್ನು ಹಳಕಟ್ಟಿಯವರು ಮಾಡಿದ್ದಾರೆ ಎಂದರು.
ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರ ಸಹಪಾಠಿಯಾಗಿದ್ದ ಹಳಕಟ್ಟಿಯವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ, ನಾಡು, ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹಳಕಟ್ಟಿಯವರು ಅಂದು ವಚನಗಳನ್ನು ಸಂಗ್ರಹಿಸಿ, ಮುದ್ರಿಸದಿದ್ದರೇ ವಚನಗಳು ಅಜ್ಜಿಯ ಕಥೆ ಹಾಗೂ ಅನಾಗರಿಕತೆಯ ಕಟ್ಟುಕಥೆಯಾಗುವ ಸಂಭವವಿತ್ತು. ತಾಳೆಗರಿ, ಓಲೆಗರಿಯ ರೂಪದಲ್ಲಿದ್ದ ಸತ್ವಯುತ ವಚನಗಳನ್ನು ಅಧ್ಯಯನ ಮಾಡಿ ಅವುಗಳು ನಶಿಸದಂತೆ ತಡೆಯುವ ನಿಟ್ಟಿನಲ್ಲಿ ಅವುಗಳನ್ನು ಸಂಗ್ರಹಿಸಿ ಮುದ್ರಿಸುವ ಕೆಲಸ ಮಾಡಿ ಕನ್ನಡ ಸೇವೆಗೆ ಇಳಿದ ಹಳಕಟ್ಟಿಯವರು ವಚನಸಾಹಿತ್ಯ ಇರುವ ಕಾಲಘಟ್ಟದವರೆಗೂ ಅವೀಸ್ಮರಣೀಯರಾಗಿ ಉಳಿಯಲಿದ್ದಾರೆ ಎಂದು ತಿಳಿಸಿದರು.
ಮನುಷ್ಯ ತನ್ನ ಅಂತರಂಗ, ಬಹಿರಂಗವನ್ನು ಅರಿಯಲು ನೆರವಾಗಿರುವ ವಚನಗಳನ್ನು ಮುದ್ರಿಸುವ ಕಾರ್ಯಕ್ಕೆ ತೊಂದರೆಯಾಗಿ ಹಳಕಟ್ಟಿ ಅವರು ತಾವು ವಾಸಿಸುವ ಮನೆಯನ್ನೆ ಮಾರುವ ಪರಿಸ್ಥಿತಿ ಎದುರಾದರೂ ಸಂಶೋಧಾನಾತ್ಮಕ ಹಾಗೂ ದೂರದೃಷ್ಠಿ ಚಿಂತನೆ ಹೊಂದಿದ್ದ ಅವರು ಧೃತಿಗೆಡದೆ ವಚನಗಳ ಮುದ್ರಣಕ್ಕೆ ಮುಂದಾದರು. ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಹಳಕಟ್ಟಿಯವರು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶಾಲೆಗಳು ಹಾಗೂ ಸಾಮಾನ್ಯ ಜನರ ಆರ್ಥಿಕತೆ ವೃದ್ಧಿಸಲು ಸಹಕಾರ ಸಂಘಗಳನ್ನು ಸ್ಥಾಪಿಸಿದರು. ‘ವಚನ ಸಾಹಿತ್ಯ ಸಾರ’ ಎಂಬ ಅದ್ಭುತ ಕೃತಿ ರಚಿಸಿ ‘ಶಿವಾನುಭವ’ ಹಾಗೂ ‘ನವಕರ್ನಾಟಕ’ ಪತ್ರಿಕೆಗಳನ್ನು ಆರಂಭಿಸಿದ ಹಳಕಟ್ಟಿ ಅವರು ಪತ್ರಿಕೆಗಳ ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರಾಗಿ ಪತ್ರಿಕಾರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಋಗ್ವೇದಿ ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ, ಮುಖಂಡರಾದ ದುಗ್ಗಹಟ್ಟಿ ಮಲ್ಲಿಕಾರ್ಜುನಪ್ಪ, ಬಿ.ಕೆ. ರವಿಕುಮಾರ್, ಕಾಳನಹುಂಡಿ ಗುರುಸ್ವಾಮಿ, ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.