ಅಗ್ನಿ ಅವಘಡಗಳ ಅನಾಹುತ ತಡೆಗಟ್ಟುವ ದಿನ ಆಚರಣೆ : ಗಮನಸೆಳೆದ ಪ್ರಾತ್ಯಕ್ಷಿಕೆ

ಚಾಮರಾಜನಗರ: ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು ಅನಾಹುತ ತಡೆಗಟ್ಟುವ ದಿನದ ಅಂಗವಾಗಿ ಇಂದು ನಗರದಲ್ಲಿ ಅಗ್ನಿ ಅನಾಹುತ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.

ಫೆಬ್ರವರಿ 23ರಂದು ಬೆಂಗಳೂರಿನ ಕಾರ್ಟನ್ ಟವರ್ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 50 ಜನ ಗಾಯಗೊಂಡು, 9 ಜನ ಮೃತರಾದರು. ಈ ಸ್ಮರಣಾರ್ಥವಾಗಿ ಸರ್ಕಾರ ಫೆಬ್ರವರಿ 23ರಂದು ಪ್ರತಿ ವರ್ಷ ಅಗ್ನಿ ಅವಘಡಗಳ ಅರಿವು ಮತ್ತು ಅನಾಹುತ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ತಾಲೂಕುಗಳಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಶಾಲೆ, ಕಾಲೇಜುಗಳು, ಬಸ್‍ನಿಲ್ದಾಣ ಹಾಗೂ ಡಿಪೆÇೀ, ಕೆ.ಇ.ಬಿ ಕಚೇರಿ ಜನನಿಬಿಡ ಪ್ರದೇಶಗಳಲ್ಲಿ ಜನರಲ್ಲಿ ಅಗ್ನಿ ಅನಾಹುತ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಬಿತ್ತಿಪತ್ರ ಪ್ರದರ್ಶನ ಮತ್ತು ಉಪನ್ಯಾಸ, ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ ಗುರುರಾಜ್ ಅವರು ಯಾವುದೇ ಅನಾಹುತ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಜನರು ದೃತಿಗೆಡದೆ ಅವಸರದ ಅಪಾಯದ ನಿರ್ಧಾರಗಳಿಗೆ ಮುಂದಾಗಬಾರದು. ರಕ್ಷಣೆಗೆ ಅಗ್ನಿಶಾಮಕ ಇಲಾಖೆ ಸದಾ ಕಟಿಬದ್ಧವಾಗಿದ್ದು, ನಮ್ಮ ಅಧಿಕಾರಿ ಸಿಬ್ಬಂದಿ ಅಗ್ನಿಶಾಮಕ ವಾಹನಗಳೊಂದಿಗೆ ನಿಮ್ಮ ರಕ್ಷಣೆಗಾಗಿ ಧಾವಿಸಿ ಬರುತ್ತಾರೆ ಎಂದರು.

ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಕಟ್ಟಡದಿಂದ ಜಿಗಿಯುದಾಗಲಿ, ನೀರಿಗೆ ಹಾರುವಂತಹ ಅಪಾಯದ ನಿರ್ಧಾರವನ್ನ ತೆಗೆದುಕೊಂಡು ಜೀವಕ್ಕೆ ತೊಂದರೆ ಮಾಡಿಕೊಳ್ಳಬಾರದು. ಹಾಗೆಯೇ ಯಾವುದೇ ಅನಾಹುತಗಳು ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎಂದು ಗುರುರಾಜ್ ಅವರು ತಿಳಿಸಿದರು.
ಅಗ್ನಿಶಾಮಕ ಅಧಿಕಾರಿ ಶಿವಾಜಿರಾವ್ ಪವಾರ್, ಇತರೆ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *