*ಡಾ.ಬಿ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜುಲೈ 5 ರಿಂದ 7ರವರೆಗೆ ಕ್ರೀಡೆ ಆಯೋಜನೆ
*ನೆಟ್‍ಬಾಲ್ ಅಸೋಸಿಯೇಷನ್‍ನ ಗೌರವಾಧ್ಯಕ್ಷೆ ನರ್ಗೀಸ್‍ಬಾನು ಮಾಹಿತಿ
ಚಾಮರಾಜನಗರ : ಜುಲೈ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ಜೂನಿಯರ್ ವಿಭಾಗದ 19 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ 6ನೇ ನೆಟ್‍ಬಾಲ್ ಪಂದ್ಯಾವಳಿಯನ್ನು ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಗೌರವಾಧ್ಯಕ್ಷೆ ನರ್ಗೀಸ್ ಬಾನು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಮೆಚೂರ್ ನೆಟ್‍ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ನಮ್ಮ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ಒದಗಿ ಬಂದಿದೆ ಎಂದು ತಿಳಿಸಿದರು.
ಈ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 700ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಈ ಕ್ರೀಡೆಯು ಅಂತರಾಷ್ಟ್ರೀಯ ಕ್ರೀಡೆಯಾಗಿದ್ದು, ಇದರಿಂದ ಜಿಲ್ಲೆಯ ಕ್ರೀಡಾಪಟುಗಳು ನೆಟ್‍ಬಾಲ್ ಕ್ರೀಡೆಯನ್ನು ಹೆಚ್ಚು ಹೆಚ್ಚಾಗಿ ಆಯ್ಕೆ ಮಾಡಿಕೊಂಡು ತಮ್ಮ ಮುಂದಿನ ಕ್ರೀಡಾ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ರಾಜ್ಯ ಮಟ್ಟದ ಪಂದ್ಯಾವಳಿ ಪೂರಕವಾಗಿರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೆಚ್ಚು ಪ್ರಚೂರ ಪಡಿಸಲು ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಸೋಸಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್ ಜನವರಿ 20ರಲ್ಲಿ ಅಸ್ತಿತ್ವಕ್ಕೆ ಬಂತು. ನಂತರ ನಮ್ಮ ಕ್ರೀಡಾಪಟುಗಳು ಮಧ್ಯ ಪ್ರದೇಶ, ಜಾರ್ಖಾಂಡ್, ಹಾಗೂ ಬೆಂಗಳೂರಿನಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಹಾಗೂ ಕಂಚಿನ ಪದಕ ತಂದಿದ್ದಾರೆ.
ನಮ್ಮ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರತಿಯೊಂದು ಶಾಲೆಗಳಲ್ಲೂ ಕೂಡಾ ಈ ಕ್ರೀಡೆಯನ್ನು ವಿಸ್ತರಣೆ ಮಾಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ನಮ್ಮ ಜಿಲ್ಲೆಯಿಂದ ತಯಾರು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಈ ಬಾರಿ ನಮ್ಮ ಜಿಲ್ಲೆಯಲ್ಲಿಯೇ ರಾಜ್ಯ ಮಟ್ಟದ ಪಂದ್ಯಾವಳಿವನ್ನು ಆಯೋಜಿಸಲಾಗುತ್ತಿದ್ದು, ನಮ್ಮ ಕ್ರೀಡಾಪಟುಗಳು ಇನ್ನೂ ಉತ್ತಮ ಆಟವನ್ನು ಪ್ರದರ್ಶಿಸುವ ಮೂಲಕ ಪ್ರಥಮ ಬಹುಮಾನ ಗೆಲ್ಲುವ ನಿರೀಕ್ಷೆ ಇದೆ. ಈ ಪಂದ್ಯಾವಳಿಗೆ ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೆ ಊಟ ಹಾಗೂ ಸೂಕ್ತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಸಂಘಟನಾ ಕಾರ್ಯದರ್ಶಿ ಮಧುಕುಮಾರ್, ಸದಸ್ಯರಾದ ರೂಪಾ ಕಾಶಿನಾಗೇಂದ್ರಪ್ರಸಾದ್, ಸಿ.ಎಸ್.ಅಕ್ಷಯ್, ಶ್ರೀಧರ್ ಹಾಜರಿದ್ದರು.