ಮಾ. 17 ರಂದು ಮೈಸೂರಿನಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ
ಚಾಮರಾಜನಗರ: ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸಂಸದನಾಗಿ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ಇದೆ. ಈ ಹಿಂದೆ 5 ಭಾರಿ ಸಂಸದನಾಗಿ ಮಾಡಿದ್ದ ಕೆಲಸ ಕಾರ್ಯಗಳನ್ನು ಈ ಬಾರಿ ಆರೋಗ್ಯ ಸಮಸ್ಯೆದಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಪಡಿಸಲು ಸಾಧ್ಯವಾಗಲಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರದ ಹಿರಿಯ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 6 ನೇ ಬಾರಿ ಸಂಸದರಾಗಿ ಚುನಾಯಿತನಾದ ಮೇಲೆ ಕ್ಷೇತ್ರದಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇವೆ. ದೆಹಲಿಯಲ್ಲಿ ಹೋಗಿ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ, ಸಂಸದರ ನಿಧಿಯಿಂದ ಕ್ಷೇತ್ರದ ಅಭಿವೃದ್ದಿಗೆ ಬಿಡುಗೆಯಾಗಿದ್ದ 17.50 ಕೋಟಿ ರೂ.ಗಳನ್ನು ಸಮರ್ಪಕವಾಗಿ ವಿನಿಯೋಗಿಸಿ, ಶಿಕ್ಷಣ, ಆರೋಗ್ಯ, ಸಮದಾಯ ಭವನಗಳ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಸಮಾನಂತರವಾಗಿ ಅನುದಾನ ಹಂಚಿಕೆ ಮಾಡಿದ್ದೇನೆ. ಹೆಚ್ಚುವರಿ ಅನುದಾನ ಹಾಗೂ ವಿಶೇಷ ಯೋಜನೆಗಳನ್ನು ತರಲು ಸಾಧ್ಯವಾಗಿಲ್ಲ ಎಂಬ ನೋವು ಇದೆ. ಆದರೆ ಕ್ಷೇತ್ರದ ಜನರ ವಿಶ್ವಾಸಕ್ಕೆ ಕಿಂಚಿತ್ತು ಅಪ್ರಚಾರವಾಗದಂತೆ ಸ್ವಾಭಿಮಾನಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ವರ್ಗದವರಿಗೆ ಸ್ಪಂದಿಸುವ ಮೂಲಕ ನನ್ನ ರಾಜಕೀಯ ಜೀವನದಲ್ಲಿ ಕಳಂಕ ರಹಿತನಾಗಿ ಸಾರ್ವಜನಿಕರ ಸೇವೆ ಮಾಡಿದ್ದೇನೆ ಎಂಬ ಅತ್ಮತೃಪ್ತಿ ಇದೆ ಎಂದರು.
ಪಾದರ್ಪಣೆ ಮಾಡಿದ ದಿನವೇ ಮಾ. 17ರಂದು ರಾಜಕೀಯ ನಿವೃತ್ತಿ : ನಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡಿ, ಮಾ. 17 2024ಕ್ಕೆ 50 ವರ್ಷಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಮಾ. 17ರಂದೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ಘಟಿಕೋತ್ಸವ ಸಭಾಂಗಣದಲ್ಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭದಲ್ಲಿ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಸ್ವಾಭಿಮಾನಿ ನೆನಪುಗಳು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ವಹಿಸಲಿದ್ದಾರೆ. ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಭಾಗವಹಿಸಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಸತ್ ಸದಸ್ಯನಾಗಿ ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ, ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹಾಗೂ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ದಿಗೆ ವಿಶೇಷ ಒತ್ತು ನೀಡಿ ಅನುದಾನ ನೀಡಿದ್ದೇನೆ. ಅಲ್ಲದೇ, ಮೈಸೂರು-ಚಾಮರಾಜನಗರದಲ್ಲಿ ಕಚೇರಿ ತೆರೆದು ಕ್ಷೇತ್ರದ ಮತದಾರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಅಪ್ತ ಸಹಾಯಕರು ಮಾಡಿದ್ದಾರೆ. ಇದು ಸೇವೆ ಅಲ್ಲವೇ? ಕೋವಿಡ್‍ನಿಂದಾಗಿ 2 ವರ್ಷಗಳು ಕಾಲ 60 ತುಂಬಿದ ನಾನು ಹೊರಗೆ ಬರಲು ಸಾಧ್ಯವಾಗಲಿಲ್ಲ. ಅದರೂ ಸಹ ಕ್ಷೇತ್ರದಲ್ಲಿ ಕೋವಿಡ್ ವೈರಸ್ ತಡೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ. 50 ಲಕ್ಷ ರೂ.ಗಳ ಅನುದಾನವನ್ನು ನೀಡಿದ್ದೇನೆ. ಯಾರೇ ಏನು ಪ್ರಶ್ನೆ ಮಾಡಿದರು ಸ್ವಾಭಿಮಾನವನ್ನು ರಾಜಕಾರಣದಲ್ಲಿ ಬಿಟ್ಟು ಕೊಟ್ಟಿಲ್ಲ ಎಂದು ವಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟರು.
ಆದಿ ಕರ್ನಾಟಕ ಅಭಿವೃದ್ದಿ ಸಂಘಕ್ಕೆ ನೀಡಿದ್ದ 10 ಲಕ್ಷ ವಾಪಸ್ : ಪ್ರದೇಶಾಭಿವೃದ್ದಿ ನಿಧಿಯಿಂದ ಚಾ.ನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ದಿ ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದೇನೆ ಎಂದು ಸಂಸದ ವಿ. ಶ್ರೀನಿವಾಸ್‍ಪ್ರಸಾದ್ ತಿಳಿಸಿದರು.
ಆದಿ ಕರ್ನಾಟಕ ಅಭಿವೃದ್ದಿ ಸಂಘದಲ್ಲಿ ನಡೆದಿದ ಎನ್ನಲಾದ ಅವ್ಯವಹಾರ ಹಾಗೂ ಇತ್ತೀಚಿಗೆ ಅಸ್ತಿ ಪರಭಾರೆ ಕುರಿತು ವಿವಾದಗಳಿಂದ ಎಚ್ಚೆತ್ತುಕೊಂಡು ನನ್ನ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದೇನೆ. ಕಳೆದ 50 ವರ್ಷಗಳ ಅವಧಿಯಲ್ಲಿ ಸರ್ಕಾರ ಸಂಘಕ್ಕೆ ನೀಡಿದ್ದ ಭೂಮಿಯನ್ನು ಅಭಿವೃದ್ದಿಪಡಿಸಲು ವಿಫಲವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಂಘದ ವಿರುದ್ದ ವಿವಾದಗಳು, ಆರೋಪಗಳು ಕೇಳಿ ಬಂದಿತ್ತು. ಈ ಬಗ್ಗೆ ನಿಷ್ಪಾಕ್ಷಾಪಾತವಾಗಿ ತನಿಖೆ ನಡೆಸಿ, ನೈಜ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‍ಗೆ ಸೂಚನೆ ನೀಡಿದ್ದೇನೆ ಎಂದು ಪ್ರಸಾದ್ ತಿಳಿಸಿದರು.
ಗೋಷ್ಠಿಯಲ್ಲಿ ಡಾ. ಎಂ.ಎಸ್. ಮೋಹನ್, ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಹಾಪ್‍ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಜಿಲ್ಲಾ ಬಿಜೆಪಿ ವಕ್ತಾರ ಬಸವರಾಜಪ್ಪ, ಜಿಲ್ಲಾ ಉಪಾಧ್ಯಕ್ಷೆ ಸರೋಜ ಇತರರು ಇದ್ದರು.