- ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನಿಂದ ಹೊಸ ಪ್ರಯತ್ನ
- ಕ್ರೀಡೆಯಷ್ಟೇ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡುವ ಉದ್ದೇಶ
- ಮುಂದಿನ ದಿನಗಳಲ್ಲಿ ಸಿಇಟಿ, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಟ್ಯೂಷನ್ ಕ್ಲಾಸ್‌ಗೂ ಚಿಂತನೆ
- ನೆಟ್‌ಬಾಲ್ ಅಸೋಸಿಯೇಷನ್‌ನ ಗೌರವಾಧ್ಯಕ್ಷೆ ನರ್ಗೀಸ್‌ಬಾನು ಮಾಹಿತಿ
ಚಾಮರಾಜನಗರ : ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನಿಂದ ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪಿಸಿಎಂಬಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಹೇಳಿಕೊಡುವ ಮೂಲಕ ಒಂದು ಹೊಸ ಪ್ರಯತ್ನ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಸೋಸಿಯೇಷನ್ ಗೌರವಾಧ್ಯಕ್ಷೆ ನರ್ಗೀಸ್‌ಬಾನು ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಪ್ರಾರಂಭ ಮಾಡಿದ್ದೆವು ಈಗ ಕ್ರೀಡೆ ಜೊತೆಗೆ ಪ್ರತಿಭಾವಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಅಸೋಸಿಯೇಷನ್ ನಿರ್ಧರಿಸಿ ಈ ವರ್ಷದಿಂದ ದ್ವಿತೀಯ ಪಿಯುಸಿ ಪಿಸಿಎಂಬಿ ವಿದ್ಯಾರ್ಥಿಗಳಿಗೆ ನುರಿತ ಉಪನ್ಯಾಸಕರಿಂದ ಉಚಿತ ಟ್ಯೂಷನ್ ಹೇಳಿಕೊಡಲಾಗುತ್ತದೆ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ನೆಟ್‌ಬಾಲ್ ಅಸೋಷಿಯೇಷನ್ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಶಿಕ್ಷಣ, ಕ್ರೀಡೆಯು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಜಿಲ್ಲೆಯಲ್ಲಿ ಕ್ರೀಡೆ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುವ ಸಲುವಾಗಿ ನಮ್ಮ ಅಸೋಷಿಯೇಷನ್ ವತಿಯಿಂದ ದ್ವಿತೀಯ
ವಿಜ್ಞಾನ ವಿಭಾಗದ ಪಿಯುಸಿ ಮಕ್ಕಳಿಗೆ ಉಚಿತ ಟ್ಯೂಷನ್ ಹೇಳಿಕೊಡಲಾಗುತ್ತದೆ. ಇಂತಹ ಅವಕಾಶವನ್ನು ಜಿಲ್ಲೆಯ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಬಾರಿ ಮಹತ್ವವಿದೆ. ಇಂದಿನ ಟ್ಯೂಷನ್ ಶುಲ್ಕದ ಹಾವಳಿಯಲ್ಲಿ ಬಡ ಪ್ರತಿಭಾವಂತ ಮಕ್ಕಳು ಟ್ಯೂಷನ್ ಪಡೆಯುವುದು ಬಹಳ ಕಷ್ಟವಾಗಿದೆ. ಅದನ್ನು ಮನಗಂಡು ನಮ್ಮ ಅಸೋಷಿಯೇಷನ್ ಕ್ರೀಡೆಗೆ ಎಷ್ಟು ಮಹತ್ವ ನೀಡಿದೆ. ಅಷ್ಟೆ ಮಹತ್ವವನ್ನು ಶಿಕ್ಷಣಕ್ಕೂ ಕೊಡುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆ ಹೊರತರುವ ಸಲುವಾಗಿ ಉಚಿತ ಟ್ಯೂಷನ್ ಆರಂಭಿಸಲಾಗಿದೆ. ಈಗಾಗಲೇ ಅಭಿಯಾನ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀಟ್, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಟ್ಯೂಷನ್ ಹೇಳಿಕೊಡಲು ಚಿಂತಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ 9901614577. 8660422976 ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಸದಸ್ಯರಾದ ಅಕ್ಷಯ್, ಯಳಂದೂರು ಲೋಕೇಶ್, ಸುರೇಶ್ ಹಾಜರಿದ್ದರು.