ಪೋಕ್ಸೋ ಕಾಯ್ದೆ ಬಗ್ಗೆ ಹೆಚ್ಚು ಅರಿವು ಪಡೆದುಕೊಳ್ಳಿ : ಡಾ. ಎಸ್. ಚಿದಂಬರ

ಚಾಮರಾಜನಗರ: ಪೋಕ್ಸೋ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಹಳೆ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕುರಿತ ವೈದ್ಯಾಧಿಕಾರಿಗಳಿಗೆ, ಶುಶ್ರೂಷಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

18 ವರ್ಷಕ್ಕಿಂತ ಒಳಗಿನ ಮಕ್ಕಳು ಗರ್ಭಿಣಿಯಾಗಿರುವುದು ಕಂಡು ಬಂದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಪೋಕ್ಸೋ ಕಾಯ್ದೆಯ ಬಗ್ಗೆ ಸಾಕಷ್ಟು ನಿರ್ಣಯಗಳು ಆಗಿವೆ. ಕಾಯ್ದೆಯ ಬಗ್ಗೆ ಸಾಕಷ್ಟು ತಿಳಿವಳಿಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೇಗೆ ತೊಡಗಿಸಿಕೊಳ್ಳಬೇಕಿದೆ ಎಂಬ ಬಗ್ಗೆ ಮಾಹಿತಿ ಹೊಂದಬೇಕು ಎಂದರು.

ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆ ಯಾವ ಪ್ರಕ್ರಿಯೆ ಅನುಸರಿಸಬೇಕಿದೆ, ತಪಾಸಣೆ, ದಾಖಲಾತಿಗಳನ್ನು ಯಾವ ರೀತಿ ಕೈಗೊಳ್ಳಬೇಕು ಎಂಬುದನ್ನು ತಿಳಿಯಬೇಕು. ಪೋಕ್ಸೋ ಕಾಯ್ದೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಬೇಕಿದೆ. ಬಾಲ್ಯ ವಿವಾಹದ ವಿರುದ್ದ ಅರಿವು ಮೂಡಿಸಬೇಕು. ಬಾಲ್ಯವಿವಾಹದಿಂದ ಆರೋಗ್ಯ ಮೇಲೆ ಆಗುವಂತಹ ಪರಿಣಾಮದ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಿದೆ ಎಂದು ಡಾ. ಎಸ್. ಚಿದಂಬರ ಅವರು ತಿಳಿಸಿದರು.

ಪ್ರಸೂತಿ ಮತ್ತು ಸ್ತ್ರಿರೋಗ ವಿಭಾಗದ ಮುಖ್ಯಸ್ಥರಾದ ಡಾ. ಪ್ರದೀಪ್, ನ್ಯಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಮುರುಳಿ ಮೋಹನ್, ಆರೋಗ್ಯ ಶಿಕ್ಷಣಾಧಿಕಾರಿ ಡಾ. ದೊರೆಸ್ವಾಮಿ, ಜಿಲ್ಲಾ ಪೊಲೀಸ್ ಇಲಾಖೆಯ ಸಂಪನ್ಮೂಲ ವ್ಯಕ್ತಿ ಪ್ರಸನ್ನ, ಡಾ. ಅಂಕಪ್ಪ, ಡಾ. ಚಂದ್ರಶೇಖರ್, ಡಾ. ರಾಜೇಶ್ ಕುಮಾರ್, ಡಾ. ರವಿಕುಮಾರ್, ಡಾ. ಸುಂದರೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *