ಚಾಮರಾಜನಗರ: ಉತ್ತಮ ಶಿಕ್ಷಣ ಪಡೆಯುವ ಮೂಲಕ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಹೆಣ್ಣುಮಕ್ಕಳು ಸುಶಿಕ್ಷಿತರಾಗಿ ಸಂಘಟಿತರಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ತಿಳಿಸಿದರು.
ನಗರದ ಹೊರವಲಯದ ಬೇಡರಪುರದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯ ಸುವರ್ಣ ಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿಂದು ‘ಮಹಿಳೆಯರ ಅಭಿವೃದ್ಧಿ ಹಾಗೂ ಸ್ವಾವಲಂಬನೆ’ ಕುರಿತು ವಿದ್ಯಾರ್ಥಿನಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣ ಮಹಿಳೆಯರ ಭವಿಷ್ಯವನ್ನು ನಿರ್ಧರಿಸುವ ಬಹುದೊಡ್ಡ ಅಸ್ತ್ರವಾಗಿದೆ. ಹೆಣ್ಣುಮಕ್ಕಳಿಗೆ ತಮ್ಮ ಹಕ್ಕುಗಳು, ರಕ್ಷಣೆಯ ಕಾನೂನುಗಳು, ಭದ್ರತೆ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಅರಿವು ಇಲ್ಲವಾಗಿದೆ. ಈ ಬಗ್ಗೆ ಐ.ಇ.ಸಿ ಕಾರ್ಯಕ್ರಮಗಳ ಜಾಗೃತಿ ಮೂಡಿಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅರಿವು ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಂಡು ತಾವು ಅರಿತು ಸಮಾಜದ ಇತರರಿಗೂ ಅರಿವು ಮೂಡಿಸಬೇಕು. ಆಗಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಾಗಲಿದೆ ಎಂದರು.
ಮಹಿಳಾ ಆಯೋಗಕ್ಕೆ ಸ್ವೀಕೃತವಾಗುವ ದೂರುಗಳನ್ನು ಗಮನಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದಲೂ 4 ದೂರುಗಳು ದಾಖಲಾಗಿವೆ. ಹೆಣ್ಣುಮಕ್ಕಳಿಗೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ. ಸೈಬರ್ ಕ್ರೈಂ ನಂತಹ ದುಷ್ಕøತ್ಯಗಳಿಗೆ ಹೆಣ್ಣುಮಕ್ಕಳೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಫೇಕ್ ಅಂಕೌಂಟ್‍ಗಳಿಂದ ಮೋಸ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಮಹಿಳೆಯರು ಮೊಬೈಲ್‍ಗಳಿಂದ ಪ್ರಭಾವಿತರಾಗದೇ ಸಕಾರಾತ್ಮಕ ಚಿಂತನೆಗಳಿಗೆ ಅದ್ಯತೆ ನೀಡಬೇಕು. ಸದೃಢ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳೆಯರಿಗೆ ಸಮಾಜದಲ್ಲಿ ಯಾವುದೇ ಬಗೆಯ ದೌರ್ಜನ್ಯಗಳಾದರೂ ನೇರವಾಗಿ ಪೊಲೀಸರಿಗೆ ದೂರು ನೀಡಬೇಕು. ಪೊಲೀಸರು ಸಹ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಜನಸ್ನೇಹಿಯಾಗಿರುವ ಪೊಲೀಸ್ ಠಾಣೆಗಳು ಮಹಿಳಾಸ್ನೇಹಿಯಾಗಿಯೂ ಕಾರ್ಯನಿರ್ವಹಿಸಬೇಕು. ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಅತ್ಮವಿಶ್ವಾಸ ತುಂಬಬೇಕು. ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಐ.ಸಿ.ಸಿ (ಇಂಟರ್‍ನಲ್ ಕಂಪ್ಲೈಟ್ ಕಮಿಟಿ) ಇರಬೇಕು. ಹೆಣ್ಣುಮಕ್ಕಳು ದೌರ್ಜನ್ಯ, ಹಿಂಸೆಗೊಳಗಾದಾಗ ಐ.ಸಿ.ಸಿ ಸಮಿತಿಯಲ್ಲಿ ದೂರು ದಾಖಲಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಹಿಳೆಯರ ರಕ್ಷಣೆ, ಸ್ವಾವಲಂಬನೆ, ಲಿಂಗ ಸಮಾನತೆ ಮೊದಲು ಮನೆಯಿಂದಲೇ ಆರಂಭವಾಗಬೇಕು. ಹಿಂದೆ ಸಾಕಷ್ಟು ಅವಕಾಶಗಳಿರಲಿಲ್ಲ. ಇಂದು ಅವಕಾಶಗಳು ವಿಫುಲವಾಗಿದೆ. ಜಿಲ್ಲೆಯ ಉನ್ನತ ಅಧಿಕಾರಿದಲ್ಲಿರುವವರು ಮಹಿಳೆಯರೇ ಆಗಿದ್ದಾರೆ. ಇದಕ್ಕೆ ಕಠಿಣ ಪರಿಶ್ರಮ ಅತ್ಯಗತ್ಯವಾಗಿದೆ. ಜಿಲ್ಲೆಯಲ್ಲಿ ಬಾಲ್ಯವಿವಾಹ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಜರುಗಿದರೆ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ಸಂ: 1077ಕ್ಕೆ ಕರೆ ಮಾಡಿ ತಿಳಿಸಿ. ತಕ್ಷಣ ಕ್ರಮ ವಹಿಸಲಾಗುವುದು ಎಂದರು.
ಸಂವಾದದ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಕಾಲೇಜಿನ ವಿದ್ಯಾರ್ಥಿನಿಯರಿಂದ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿದರು.
ನಂತರ ವಿಶ್ವವಿದ್ಯಾಲಯದ ಆವರಣದಲ್ಲಿರುವ ಮಹಿಳೆಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದರು. ಹಾಸ್ಟಲ್‍ನಲ್ಲಿರುವ ಸಮಸ್ಯೆಗಳ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು. ವಿದ್ಯಾರ್ಥಿನಿಲಯದಲ್ಲಿ ನೀಡುವ ಊಟ, ಉಪಹಾರ ಗುಣಮಟ್ಟದಿಂದ ಕೂಡಿಲ್ಲ. ವಿದ್ಯಾರ್ಥಿನಿಲಯವು ಪಟ್ಟಣದಿಂದ ಹೊರಗಿರುವುದರಿಂದ ರಾತ್ರಿವೇಳೇ ಯಾವುದೇ ವೈದ್ಯಕೀಯ ಸಮಸ್ಯೆ ಎದುರಾದರೂ ಸಾರಿಗೆ ವ್ಯವಸ್ಥೆಯ ಕೊರತೆ ಇದೆ. ಇದನ್ನು ಸರಿಪಡಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.
ಸಮಸ್ಯೆಗಳನ್ನು ಆಲಿಸಿದ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಏನೇ ಸಮಸ್ಯೆ, ಕುಂದುಕೊರತೆಗಳಿದ್ದರೂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿನಿಲಯದ ವ್ಯವಸ್ಥೆಗಳನ್ನು ಸರಿಪಡಿಸಲಾಗುವುದು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ವಿದ್ಯಾರ್ಥಿನಿಲಯಕ್ಕೆ ಬೇಕಾಗಿರುವ ಸೌಲಭ್ಯಗಳು, ಆಗಬೇಕಾಗಿರುವ ವ್ಯವಸ್ಥೆಗಳ ಕುರಿತು ಲಿಖಿತವಾಗಿ ಪ್ರಸ್ತಾವನೆ ಸಲ್ಲಿಸಿ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರೊಂದಿಗೆ ವಿದ್ಯಾರ್ಥಿಗಳ ಜೊತೆ ಕುಳಿತು ಮಹಿಳಾ ಆಯೋಗದ ಅಧ್ಯಕ್ಷರು ಊಟ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ವಿವಿ ಪ್ರವೇಶದ್ವಾರದಲ್ಲಿ ರಂಗೋಲಿ ಮೂಲಕ ಚಿತ್ರೀಕರಿಸಿದ್ದ ಸಾಮಾಜಿಕ ನ್ಯಾಯ ಕುರಿತ ತಕ್ಕಡಿ ಹಿಡಿದಿರುವ ನ್ಯಾಯದೇವತೆ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ, ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
Like this:
Like Loading...
Related