ಚಾಮರಾಜನಗರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಇಂದು ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಮೋಳೆ, ಕುಂತೂರು, ಉತ್ತಂಬಳ್ಳಿ, ಸಿದ್ದಯ್ಯನಪುರ, ಸಿಂಗಾನಲ್ಲೂರು ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಹಾಗೂ ನರೇಗಾ ಯೋಜನೆಯ ಕಾಮಗಾರಿ ಪರಿಶೀಲಿಸಿದರು.
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ 92 ಕಾಮಗಾರಿಗಳನ್ನು ತೆಗೆದುಕೊಂಡಿದ್ದು, ಈವರೆಗೆ 84 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 57 ಕಾಮಗಾರಿಗಳನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಪೈಕಿ 5 ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಪರಿಶೀಲನೆ ನಡೆಸಲಾಯಿತು.
ಜೆಜೆಎಂ ಯೋಜನೆಯಡಿ ಅಳವಡಿಸಿರುವ ಕಾರ್ಯಾತ್ಮಕ ಗೃಹನಳ ಸಂಪರ್ಕದ ಗುಣಮಟ್ಟ, ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ, ನೀರಿನ ಗುಣಮಟ್ಟ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ ಅಳವಡಿಕೆ ಮತ್ತು 24*7 ನೀರು ಸರಬರಾಜು ಗ್ರಾಮ ಘೋಷಣೆ ಕುರಿತು ವರದಿಗಳನ್ನು ಪರಿಶೀಲಿಸಿ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ಬಳಿಕ ಕುಂತೂರು ಗ್ರಾಮದ ಸಕ್ಕರೆ ಕಾರ್ಖಾನೆ ಬಳಿ ಇರುವ ಸುಮಾರು 8 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು. ಅಲ್ಲದೇ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರಸ್ತೆಬದಿ ಸಸಿ ನೆಟ್ಟಿರುವ ಕಾಮಗಾರಿಯನ್ನು ವೀಕ್ಷಿಸಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಎಸ್. ಜಗದೀಶ್, ಸಹಾಯಕ ಎಂಜಿನಿಯರ್ ಸುಧನ್ವನಾಗ್, ಜೆಜೆಎಂ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಸಿ.ಎಂ. ಆಶಾ, ಸಹಾಯಕ ನಿರ್ದೇಶಕರಾದ ಗೋಪಾಲಕೃಷ್ಣ, ಸಹಾಯಕ ಇಂಜಿನಿಯರ್ ಪೂರ್ಣಿಮಾ, ಜೆಸಿ ಮಹದೇವಪ್ಪ, ಕೊಳ್ಳೇಗಾಲ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
Like this:
Like Loading...
Related