
ಚಾಮರಾಜನಗರ: ಸಾಮಾಜಿಕ ತಾರತಮ್ಯ, ಅಸ್ಪøಶ್ಯತೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ದ ಸರಳ ವಚನಗಳನ್ನು ರಚಿಸಿ ಜನಜಾಗೃತಿ ಮೂಡಿಸಿದ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖರಾಗಿದ್ದಾರೆ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಶಿವಶರಣ ಹಡಪದ ಅಪ್ಪಣ್ಣ’ ಅವರ 891ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಶರಣ ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿ ಸರಳ ವಚನಗಳನ್ನು ರಚಿಸಿ ಅಸ್ಪøಶ್ಯತೆ ವಿರುದ್ದ ಹೋರಾಡಿ ಸಮಸಮಾಜ ನಿರ್ಮಾಣ ಕಾರ್ಯದಲ್ಲಿ ಬಸವಣ್ಣನವರೊಂದಿಗೆ ದುಡಿದವರು. ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ 250 ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಸರಳ, ಮಿತಭಾಷಿ, ಸಜ್ಜನಿಕೆಯ ಮೇರುವ್ಯಕ್ತಿತ್ವದ ಹಡಪದ ಅಪ್ಪಣ್ಣ ಅವರನ್ನು ಸ್ಮರಿಸುವುದು ಅವಶ್ಯವಾಗಿದೆ ಎಂದು ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ 12ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಹಡಪದ ಅಪ್ಪಣ್ಣ ಅವರು ಅಗ್ರಗಣ್ಯರಾಗಿದ್ದಾರೆ. 12ನೇ ಶತಮಾನವು ಇಡೀ ಜಗತ್ತಿನಲ್ಲಿಯೇ ಧಾರ್ಮಿಕ, ಪ್ರಗತಿಪರ, ಆಧ್ಯಾತ್ಮಿಕ ಹಾಗೂ ವೈಚಾರಿಕಾ ಕ್ರಾಂತಿ ಹುಟ್ಟುಹಾಕಿ ನವಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿತು. ಸಮಾನ ಮನಸ್ಕ ಶಿವಶರಣರು ಅನುಭವ ಮಂಟಪ ಕಟ್ಟಿ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವ ಕೆಲಸ ಮಾಡಿದರು. ಜಾತೀಯತೆ, ಅಸ್ಪøಶ್ಯತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ನಿಜವಾದ ಪ್ರಜಾಪ್ರಭುತ್ವ ಸೃಷ್ಠಿಯಾದದ್ದು 12ನೇ ಶತಮಾನದಲ್ಲಿ. ಜನರಿಗೆ ಅರ್ಥವಾಗುವ ಸರಳ ವಚನಗಳ ಮೂಲಕ ಜಾತಿಪದ್ದತಿ ನಿರ್ಮೂಲನೆಗೆ ಮಾನವೀಯ ನೆಲೆಗಟ್ಟಿನಲ್ಲಿ ಭದ್ರಬುನಾದಿ ಹಾಕಲು ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ಪ್ರಗತಿಪರ ವಿಚಾರವಾದಿಗಳಾದ ಅರಕಲವಾಡಿ ನಾಗೇಂದ್ರ ಅವರು ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಜನರು ಬಸವಣ್ಣನವರ ಜೊತೆಗಿದ್ದರು. ಆದರೆ ಹಡಪದ ಅಪ್ಪಣ್ಣ ಅವರು ಬಸವಣ್ಣನವರಿಗೆ ಅಂತಿಮ ಕಾಲದವರೆಗೂ ಜೊತೆಯಾಗಿದ್ದರು. ಅನುಭವ ಮಂಟಪದಲ್ಲಿ ಎಲ್ಲರಿಗೂ ಪ್ರಿಯವಾಗಿದ್ದ ಶಿವಶರಣ ಎಂದರೇ ಅದು ಅಪ್ಪಣ್ಣ ಮಾತ್ರ. ಅನುಭವ ಮಂಟಪಕ್ಕೆ ಯಾರೇ ಆಗಮಿಸಿದರೂ ಮೊದಲು ಕೆಳಸ್ತರದ ಸಮುದಾಯಕ್ಕೆ ಸೇರಿದ ಹಡಪದ ಅಪ್ಪಣ್ಣ ಅವರನ್ನು ನೋಡಿ, ಮಾತನಾಡಿಸಿಕೊಂಡು ಬಳಿಕ ಬಸವಣ್ಣನವರನ್ನು ಭೇಟಿಯಾಗುವ ಷರತ್ತು ಇತ್ತು. ಇದು ಬಸವಣ್ಣನವರ ಸಮಸಮಾಜದ ಉತ್ತಮ ಸಂದೇಶವಾಗಿದೆ ಎಂದರು.
ಹಡಪದ ಅಪ್ಪಣ್ಣ ಅವರ ಮೂಲ ಹೆಸರು ಜೀವಣ್ಣ ಎಂಬುದಾಗಿದೆ. ಹಡಪದ ಎಂದರೇ ತಾಂಬೂಲದ ಚೀಲ ಅಥವಾ ಕ್ಷೌರದ ಚೀಲವಾಗಿದೆ. ಬಸವಣ್ಣನವರು ಹಡಪದ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡದ್ದಕ್ಕೆ ಅಪ್ಪಣ್ಣ ಎಂಬ ಹೆಸರು ಬಂದಿತು. ಸಮಾಜವನ್ನು ವಿಡಂಬನಾತ್ಮಕವಾಗಿ ತಿದ್ದುವಂತಹ 250 ವಚನಗಳನ್ನು ರಚಿಸುವ ಮೂಲಕ ವಚನ ಚಳವಳಿ ಹುಟ್ಟುಹಾಕಿದ ಪ್ರಮುಖರಲ್ಲಿ ಹಡಪದ ಅಪ್ಪಣ್ಣ ಅವರು ಸಹ ಒಬ್ಬರಾಗಿದ್ದಾರೆ. ಅನುಭವ ಮಂಟಪದಲ್ಲಿ 770 ಗಣಗಳು ಹಾಗೂ 196000 ಮಂದಿ ಶಿವಶರಣರಿದ್ದರು. ಅಷ್ಟೂ ಮಂದಿ ಶಿವಶರಣರಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ಮಾತ್ರ ತಮ್ಮ ಜೊತೆಗೆ ಇರಿಸಿಕೊಂಡಿದ್ದರು ಎಂದರೇ ಅಪ್ಪಣ್ಣ ಅವರ ಮೌಲ್ಯ ಬಹಳ ತೂಕವಾಗಿದೆ ಎಂದು ತಿಳಿಸಿದರು.
ವಚನಗಳಲ್ಲಿ ಬದುಕಿದೆ, ಭವಿಷ್ಯವಿದೆ, ಸಂಸ್ಕಾರವಿದೆ. ಆ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ, ಮುಂದಿನ ತಲೆಮಾರಿಗೆ ತಿಳಿಸಿಕೊಡಬೇಕಾಗಿದೆ. ಸಮುದಾಯದ ವೃತ್ತಿ ಶ್ರೇಷ್ಠವಾದದ್ದೆ. ಆದರೇ ಮಕ್ಕಳು ಅದನ್ನೇ ಮುಂದುವರಿಸದೇ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದು ಗೌರವಯುತ ಜೀವನ ಕಟ್ಟಿಕೊಳ್ಳಬೇಕಾಗಿದೆ ಎಂದು ಅರಕಲವಾಡಿ ನಾಗೇಂದ್ರ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಅನುಭವ ಮಂಟಪದ ಶಿವಶರಣರಲ್ಲಿ ಹಡಪದ ಅಪ್ಪಣ್ಣ ಅವರು ಅತ್ಯಂತ ಮೌಲ್ಯಯುತ ವಚನಗಳನ್ನು ರಚಿಸಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಶಿಕ್ಷಣವೇ ಸಮುದಾಯದ ಆಸ್ತಿಯಾಗಿದೆ. ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಮುಂಚೂಣಿಗೆ ತರಬೇಕು. ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಸಮುದಾಯ ಭವನ ನಿರ್ಮಾಣ ಹಾಗೂ ನಗರದ ಹೊರವಲಯದಲ್ಲಿರುವ ಯಡಪುರದಲ್ಲಿ ಆಶ್ರಯ ನಿವೇಶನ ನೀಡಲು ಶಾಸಕರ ಮೂಲಕ ಕ್ರಮ ವಹಿಸಲಾಗುವುದು ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯ ವ್ಯಕ್ತಿಗಳನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ಮಕ್ಕಳಿಗೆ ಸ್ಮರಣಿಕೆಯೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವೆಂಕಟರಾಜು, ಚಾಮರಾಜನಗರ ತಾಲೂಕು ಅಧ್ಯಕ್ಷರಾದ ಬಸವಣ್ಣ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ವಿಠಲ, ಯಳಂದೂರು ತಾಲೂಕು ಅಧ್ಯಕ್ಷರಾದ ಶ್ರೀಕಂಠಸ್ವಾಮಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾದ ರಾಚಪ್ಪಾಜಿ, ಮಹಿಳಾ ಘಟಕದ ಅಧ್ಯಕ್ಷರಾದ ದೊಡ್ಡತಾಯಮ್ಮ, ಇತರರು ಕಾರ್ಯಕ್ರಮದಲ್ಲಿ ಇದ್ದರು.