ಚಾಮರಾಜನಗರ, ಫೆಬ್ರವರಿ 27 (ಕರ್ನಾಟಕ ವಾರ್ತೆ):- ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ನಗರದಲ್ಲಿಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜನಸ್ಪಂದನ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಜನತೆ ಗುಂಪಾಗಿ ಬಂದು ತಮ್ಮ ಊರಿನ ಸಮಸ್ಯೆಗಳನ್ನು ನಿವೇದಿಸಿಕೊಂಡರು. ಇನ್ನೂ ಹಲವರು ತಮ್ಮ ಅಹವಾಲುಗಳನ್ನು ಲೋಕಸಭಾ ಸದಸ್ಯರ ಮುಂದೆ ಹೇಳಿಕೊಂಡರು.
ಬಿ.ಆರ್. ಹಿಲ್ಸ್ ರಸ್ತೆಯ ಮಾರ್ಗವಾಗಿ ಕೋಡಿಮೋಳೆ ಗ್ರಾಮವು ಇದ್ದು ಇಲ್ಲಿ ಹಲವು ವರ್ಷಗಳಿಂದ ಚರಂಡಿ ಹದಗೆಟ್ಟಿದೆ. ಮಳೆ ಬಂದ ಸಂದರ್ಭದಲ್ಲಿ ಶಾಲಾ ಆವರಣಕ್ಕೆ ನೀರು ನುಗ್ಗುತ್ತಿದ್ದು, ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಿಕೊಡುವಂತೆ ಅಲ್ಲಿನ ಸ್ಥಳೀಯರು ಮನವಿ ಮಾಡಿಕೊಂಡರು. ಸಭೆಯಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆಸಿ ಇದಕ್ಕೆ ಕೂಡಲೇ ಕ್ರಮವಹಿಸುವಂತೆ ಸಂಸದರು ನಿರ್ದೇಶನ ನೀಡಿದರು.
ಮಾದಾಪುರ ಗ್ರಾಮದ ಹೆದ್ದಾರಿಯಲ್ಲಿ ರಸ್ತೆ ಡುಬ್ಬ ನಿರ್ಮಿಸಬೇಕು. ಇಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಲೋಕಸಭಾ ಸದಸ್ಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೆ ಅಗತ್ಯವಿರುವ ಮುಂದಿನ ಕೆಲಸಕ್ಕೆ ಕ್ರಮವಹಿಸುವಂತೆ ಸೂಚಿಸಿದರು.
ಪಣ್ಯದಹುಂಡಿ ಹತ್ತಿರ ಬಸ್ ನಿಲ್ದಾಣ, ಅಂಡರ್ ಪಾಸ್ ರಸ್ತೆ, ಸೇರಿದಂತೆ ಇನ್ನಿತರ ಸೌಲಭ್ಯಗಳಿಗೆ ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮನವಿ ಸಲ್ಲಿಸಿದರು. ಹೊಂಡರಬಾಳು ಸುತ್ತಮುತ್ತಲ ಪ್ರದೇಶದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಹಾಕಲಾಗಿರುವ ಬೇಲಿಯನ್ನು ಹಾಳು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಮನವಿ ಮಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು ಒಂದು ವರ್ಷದಿಂದ ಕರೆಯಲಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಭೆಯಲ್ಲಿ ಮುಖಂಡರು ಗಮನಕ್ಕೆ ತಂದರು. ಸಿಂಧುತ್ವ ಪ್ರಮಾಣ ಪತ್ರ ವಿಳಂಬ ವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಲಾಯಿತು.
ಹೆಚ್.ಡಿ. ಫಾರೆಸ್ಟ್ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಿ ಕೊಡಬೇಕೆಂದು ಸಹ ಸಭೆಯಲ್ಲಿ ಗಮನ ಸೆಳೆಯಲಾಯಿತು. ಪ್ರತಿ ಸಮಸ್ಯೆಯನ್ನು ವಿವರವಾಗಿ ಆಲಿಸಿದ ಸಂಸದರು ಕೂಡಲೇ ಆಗಬೇಕಿರುವ ಕೆಲಸಗಳಿಗೆ ವಿಳಂಬ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕಿನ ಸುವರ್ಣಾವತಿ ಹಗೂ ಚಿಕ್ಕಹೊಳೆ ಜಲಾಶಯಗಳ ಮುಂಗಭಾಗದಲ್ಲಿರುವ ಉದ್ಯಾನವನ ಸಾಕಷ್ಟು ವರ್ಷಗಳಿಂದ ಪಾಳು ಬಿದಿದ್ದೆ. ಇಲ್ಲಿಗೆ ಸಾಕಷ್ಟು ಜನರು ಭೇಟಿ ಕೊಡುತ್ತಿದ್ದಾರೆ. ಪ್ರವಾಸೋದ್ಯಮ ದೃಷ್ಠಿಯಿಂದ ಇದನ್ನು ಅಭಿವೃದ್ದಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗುತ್ತದೆ ಎಂಬ ಸಲಹೆ ಜನಸ್ಪಂದನ ಸಭೆಯಲ್ಲಿ ವ್ಯಕ್ತವಾಯಿತು.
ಈ ಸಂಬಂಧ ಪ್ರತಿಕ್ರಿಯಿಸಿದ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಈ ಕುರಿತು ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಅಭಿವೃದ್ದಿ ಸಂಬಂಧ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾದವು. ಹಲವರು ನೇರವಾಗಿ ಸಂಸದರ ಮುಂದೆ ಸಮಸ್ಯೆ ಹೇಳಿಕೊಂಡು ಪರಿಹರಿಸಲು ಮನವಿ ಮಾಡಿಕೊಂಡರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ. ಡಿ.ಸಿ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷರಾದ ಸೋಮೇಶ್ವರ, ಇತರರು ಈ ಸಂದರ್ಭದಲ್ಲಿ ಇದ್ದರು.
Like this:
Like Loading...
Related