ಲಿಂಗಾಂಬುಧಿಯ ವಾಯು ವಿಹಾರಿಗಳಿಗೆ ಹರ್ಬಲ್ ಜ್ಯೂಸ್..!

  • ಯುವಜನತೆಗೆ ಮಾದರಿಯಾಗಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಮಂಜುನಾಥ್
ಇತ್ತೀಚಿಗೆ ಸ್ವಾಮಿ ವಿವೇಕಾನಂದರವರ ಜಯಂತಿ ದಿನವನ್ನು "ರಾಷ್ಟ್ರೀಯ ಯುವ ದಿನ" ಎಂದು ಆಚರಿಸಲಾಗಿದೆ. ಈ ದಿನಗಳಲ್ಲಿ ನಮ್ಮ ಯುವಜನತೆಯು ರಾಷ್ಟ್ರದ ಸಂಪತ್ತು. ನಾವು ಅವರನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಪರಿಣಾಮಕಾರಿಯಾಗಿ ಯಾವುದೇ ಕೆಲಸ ಕಾರ್ಯಗಳು ಆಗುತ್ತವೆ. ಆದರೆ ನಮ್ಮ ಯುವಜನತೆ ಕೇವಲ ಓದಿನಲ್ಲಿ ಕಳೆದು ಹೋಗುತ್ತಿದ್ದಾರೆ. ಒಂದಷ್ಟು ವರ್ಷ ಓದು, ನಂತರ ಒಂದಿಷ್ಟು ಕೆಲಸ. ಈ ನಡುವೆ ಎಲ್ಲೋ ಕಳೆದುಹೋಗುತ್ತಿದ್ದಾರೆ. ಹಲವರು ಅತಿ ಹೆಚ್ಚು ಅಂಕ ಪಡೆದಿದ್ದರೂ ಕೂಡ ಒಂದೆಡೆ ಕೆಲಸವು ಸಿಗದೇ ಮತ್ತೊಂದೆಡೆ ಯಾವುದಾದರೂ ಸ್ವಾವಲಂಬಿ ಬದುಕನ್ನು ಕೂಡ ನಡೆಸದೆ ಸುಮ್ಮನೆ ಕಲಹರಣ ಮಾಡುತ್ತಾ ಕುಳಿತಿರುವುದು ಕಂಡುಬರುತ್ತವೆ. 

ಕೆಲವರು ನಾನು ಓದಿ ಸರ್ಕಾರಿ ಕೆಲಸ ಗಿಟ್ಟಿಸಲೇಬೇಕು ಎನ್ನುವ ಛಲದಿಂದ ನಾಲ್ಕೈದು ಪದವಿ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ. ತಮ್ಮ ಅರ್ಧ ಆಯಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಅನೇಕ ಸ್ವಯಂ ಉದ್ಯೋಗಗಳು, ತರಬೇತಿ ಕೇಂದ್ರಗಳು ಇವೆ. ಅಲ್ಲಿ ನಿಯಮಿತವಾಗಿ ತರಬೇತಿ ಪಡೆದು ಪ್ರಾರಂಭಿಸಬಹುದು ಅದನ್ನು ಮಾಡುತ್ತಿಲ್ಲ.  ಹೆಚ್ಚಿನ ಓದು ಓದಿದ್ದರೂ ಕೂಡ ಸ್ವಯಂ ಉದ್ಯೋಗವನ್ನು ತಾತ್ಕಾಲಿಕವಾಗಿ ಬಿಡುವಿನ ಸಮಯದಲ್ಲಿ ಮಾಡಿ ಆರ್ಥಿಕವಾಗಿ ಹಣ ಗಳಿಸುವ ಅನೇಕ ಯುವಕರು ನಮ್ಮ ಮುಂದೆ ಕಾಣಸಿಗುತ್ತಿದ್ದಾರೆ. ಅವರಲ್ಲಿ ಮಂಜುನಾಥ್ ಎಲ್ ಜೆ ರವರು ಎಲ್ಲರಿಗೂ ಮಾದರಿಯಾಗುತ್ತಾರೆ.

25 ವರ್ಷದ ಎಂಬಿಎ ಓದುತ್ತಿರುವ ಮಂಜುನಾಥ್ ಲಿಂಗಾoಬುಧಿ ಉದ್ಯಾನವನದ ಮುಂಭಾಗದಲ್ಲಿ ರಾಮಕೃಷ್ಣನಗರದ ಎಚ್ ಬ್ಲಾಕ್ ಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಇವರ "ಮೈಗ್ರೀನ್ ಲೀಪ್" ಎಂಬ ಹೆಸರಿನ ಹರ್ಬಲ್ ಜ್ಯೂಸ್ ಸೆಂಟರ್ ಅನ್ನ ಚಿಕ್ಕದಾಗಿ ಆರಂಭಿಸಿದ್ದಾರೆ. 

ಇದು ಪ್ರಾರಂಭದಲ್ಲಿ ಸ್ವಲ್ಪ ಪ್ರಾಣದಲ್ಲಿ ಒಂದು 40 ರಿಂದ 50 ಜನರುಗಳು ಇಲ್ಲಿಗೆ ಬರುತ್ತಿದ್ದರು. ಈಗ ಸುಮಾರು 200 ರಿಂದ 250 ರವರೆಗೂ ಕೂಡ ವಾಯು ವಿಹಾರಗಳು ಇಲ್ಲಿಗೆ ಬರುತ್ತಾರೆ. ಬೇಸಿಗೆ ಸಮಯದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗವನ್ನು ಪಡೆಯುತ್ತಾರೆ. ಬೆಳಗಿನ ಸಮಯದಲ್ಲಿ ವಾಯು ವಿಹಾರಿಗಳು ಉದ್ಯಾನವನಕ್ಕೆ ಬರುವುದಕ್ಕೆ ಮುಂಚೆ ಹರ್ಬಲ್ ಜ್ಯೂಸ್ ಸವಿಯುತ್ತಾರೆ. ಈ ಒಂದು ಕೆಲಸದಲ್ಲಿ ನನಗೆ ತೃಪ್ತಿ ಇದೆ. ನಾನು ಈ ಸ್ಥಳದಲ್ಲಿ  ಕಳೆದ ಐದು ವರ್ಷಗಳಿಂದಲೂ ಕೂಡ ಇದರಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ. 

ಮಂಜುನಾಥ್ ರವರಲ್ಲಿ ಪ್ರತಿದಿನ ಸಿಗುವ ಹರ್ಬಲ್ ಜ್ಯೂಸ್ ಗಳು 40ಕ್ಕೂ ಹೆಚ್ಚು. ಅವನ್ನೆಲ್ಲ ಮನೆಯಲ್ಲೇ ನಿಯಮಿತವಾಗಿ ತಯಾರಿಸಿಕೊಂಡು ಮುಂಜಾನೆ 6.30  ಕ್ಕೆ ಹಾಜರಾಗುತ್ತಾರೆ. ಸುಮಾರು 10 ರವರೆಗೂ ಇರುತ್ತಾರೆ. ಒಮ್ಮೊಮ್ಮೆ ಅವರು ತಂದಿರುವ ಎಲ್ಲಾ ಜ್ಯೂಸ್ ಗಳು ಬೇಗನೆ ಮುಗಿದು ಹೋಗುತ್ತವೆ!.  ಒಮ್ಮೊಮ್ಮೆ ಪ್ರತಿದಿನ ಬರುವವರಿಗೂ ಸಿಗುವುದಿಲ್ಲ. ಮನೆಯ ಸ್ವಚ್ಛವಾದ ನೀರನ್ನ ಉಪಯೋಗಿಸಿ, ವಿವಿಧ ನ್ಯಾಚುರಲ್ ಗಿಡಮೂಲಿಕೆಗಳಿಂದ ತಯಾರಿಸಿರುತ್ತಾರೆ. ಇವುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಹಾಕುವುದಿಲ್ಲ. ಅಂದು ಮುಂಜಾನೆ ತಯಾರಿಸಿದ ಎಲ್ಲಾ ಪದಾರ್ಥಗಳನ್ನು ಅದೇ ದಿನ ಮುಗಿಸುತ್ತಾರೆ. ಮತ್ತೆ ಇನ್ನು ಮಾರನೇ ದಿನ. ಇದು ಅವರ ದಿನಚರಿಯಾಗಿದೆ.

ಇವರ ಮೈಗ್ರೇನ್ ಲೀಫ್ ಸೆಂಟರ್ ನಲ್ಲಿ ಸಿಗುವ ಪ್ರಮುಖ ಹರ್ಬಲ್ ಜ್ಯೂಸ್ ಗಳು ಯಾವುವು ಎಂದರೆ..... ಬೂದುಗುಂಬಳ, ನೆಲ್ಲಿಕಾಯಿ, ಹಾಗಲಕಾಯಿ, ಬಾಳೆದಿಂಡು, ಎಬಿಸಿ ಜ್ಯೂಸ್ (ಅಂದರೆ ಕ್ಯಾರೆಟ್ ಬೀಟ್ರೂಟ್ ಸೇಬು ಮಿಶ್ರಣ), ಬೇವು, ಸಬ್ಜಾ ಸೀಡ್ಸ್, ಅಮೃತಬಳ್ಳಿ, ತುಳಸಿ, ವೀಳ್ಯದೆಲೆ, ಶುಂಠಿ, ಗರಿಕೆ, ಸೀಬೆ, ವೀಳ್ಯದ ಎಲೆ, ಪುದೀನ, ಒಂದೆಲಗ, ಬಿಲ್ಪತ್ರೆ, ಅರಳಿ ಎಲೆ, ಪಾಲಕ್, ಕರಿಬೇವು ಮುಂತಾದ ತರಕಾರಿ ಮತ್ತು ಸೊಪ್ಪುಗಳಿಂದ ಇವರೇ ಸ್ವತಹ ಮನೆಯಲ್ಲಿ ತಯಾರಿಸುತ್ತಾರೆ. ಇದಕ್ಕೆ ಐಸ್ಅನ್ನು ಕೂಡ ಹಾಕುವುದಿಲ್ಲ. ತಾಜಾ ನೀರಿನೊಂದಿಗೆ ಮುಂಜಾನೆ ಬೆಳಗ್ಗೆ 3:30ಕ್ಕೆ ಎದ್ದು ಸುಮಾರು 6 ರವರೆಗೆ ರೆಡಿ ಮಾಡುತ್ತಾರೆ. 

ಈ ಮೇಲ್ಕಂಡ ಎಲ್ಲಾ ಹರ್ಬಲ್ ಜ್ಯೂಸ್ ನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲಾ ಜ್ಯೂಸ್ ಗಳನ್ನು ಒಂದೇ ದಿನ ಕುಡಿಯಲು ಕೇಳಿದರೆ ಅವರು ಖಂಡಿತ ಕೊಡುವುದಿಲ್ಲ!. ಏಕೆಂದರೆ ನಮ್ಮಲ್ಲಿರುವ ಸಮಸ್ಯೆಗಳಿಗೆ ತಕ್ಕಂತೆ ಅವರು ಜ್ಯೂಸ್ ಅನ್ನ ನೀಡುತ್ತಾರೆ. ಉದಾಹರಣೆಗೆ ನೆಗಡಿ, ಕೆಮ್ಮು ಶೀತ ಇದ್ದರೆ ಅದಕ್ಕೆ ಬೇರೆ ಜ್ಯೂಸ್, ಬಿ ಪಿ, ಶುಗರ್, ಗ್ಯಾಸ್ಟಿಕ್ ಇದ್ದರೆ ಬೇರೆ ಬೇರೆ ಜ್ಯೂಸ್ ನೀಡುತ್ತಾರೆ. ಅಲ್ಲದೇ ಕಿಡ್ನಿ ಸ್ಟೋನ್, ಲಿವರ್ ತೊಂದರೆ, ಹಿಮೋಗ್ಲೋಬಿನ್ ಹೆಚ್ಚಳ ಮಾಡಲು ಇನ್ನು ಮುಂತಾದ ಸಮಸ್ಯೆಗಳಿಗೂ ಕೂಡ ಇವರು ನಿಯಮಿತವಾಗಿ ಜ್ಯೂಸನ್ನು ನೀಡುತ್ತಾರೆ. 

ನಮಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವವರೆಗೂ ಕೂಡ ಕೆಲವಾರು ಜ್ಯೂಸ್ ಗಳನ್ನು ನೀಡುತ್ತಾರೆ ಉದಾಹರಣೆಗೆ ಬೀಟ್ರೂಟ್, ಬೂದುಗುಂಬಳ, ಆಮ್ಲ, ಎಬಿಸಿ ಜ್ಯೂಸ್ ಮತ್ತು ಮಿಲೆಟ್ಸ್ ನೀಡುತ್ತಾರೆ. 

ಇವರು ಮೀಲೆಟ್ಸ್ ಅಂದರೆ    ರಾಗಿ, ಜೋಳ, ನವಣೆ, ಸಜ್ಜೆ, ಸಾಮೆ, ಕೊರಳೆ, ಊದಲು ಇವುಗಳ ಮಿಶ್ರಣ ಇರುವ ಸಿರಿಧಾನ್ಯ ಗಂಜಿ ಕೂಡ ಬಿಸಿಬಿಸಿಯಾಗಿ ಸಿಗುತ್ತದೆ. ಇದರ ಜೊತೆ ಜೊತೆಗೆ ಸನ್ ಫ್ಲವರ್ ಸೀಡ್ಸ್, ಅಗಸೆ ಬೀಜ ಇವುಗಳ ಜ್ಯೂಸ್ ಕೂಡ ಸಿಗುತ್ತದೆ. ಇವರ ಬಳಿ ಕೇವಲ ದೊಡ್ಡವರಲ್ಲದೆ ಮಕ್ಕಳು, ಯುವಕರು, ಮಹಿಳೆಯರು ಎಲ್ಲರೂ ಬರುತ್ತಾರೆ. 

ವಿವೇಕಾನಂದ ನಗರ ನಿವಾಸಿಯಾದ ಮಂಜುನಾಥ್ ಎಲ್ ಜೆ ರವರು ಈ ರೀತಿಯ ಸಾತ್ವಿಕ ಜ್ಯೂಸ್ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವತ್ತಿನ ಒತ್ತಡದ ಜೀವನ, ಯಾಂತ್ರಿಕ ಬದುಕಿನ ಜಂಜಾಟದಲ್ಲಿ ನಮಗೆ ದಿನ ಪ್ರತಿ ಒಂದಲ್ಲ ಒಂದು ಸಮಸ್ಯೆಗಳು ತಲೆದೋರುತ್ತವೆ.

ಪ್ರತಿದಿನ ಈ ಲಿಂಗಾಂಬುಧಿ ಉದ್ಯಾನವನಕ್ಕೆ ಬರುವ ಅನೇಕರು ಇದರ ಸದುಪಯೋಗವನ್ನು ಒಂದಲ್ಲ ಒಂದು ರೀತಿಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಅವರುಗಳಲ್ಲಿ ಅನೇಕರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ……… ಕಣ್ಣೂರು ವಿ ಗೋವಿಂದಾಚಾರಿ ಆರ್‌ಎಂಪಿಯಲ್ಲಿ ನರ್ಸಿಂಗ್ ಸೂಪರ್ವೈಸರ್ ಆಗಿ ಕೆಲಸ ನಿರ್ವಹಿಸಿ, ಈಗ ನಿವೃತ್ತರಾಗಿದ್ದು, ನಾನು ಗಮನಿಸಿದಂತೆ ಅವರು ಈ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ತಮ್ಮ ಕೆಲಸವನ್ನ ಆರೋಗ್ಯದ ದೃಷ್ಟಿಯಿಂದ ಮಾಹಿತಿಗಳೊಂದಿಗೆ ಮಾಡುತ್ತಿದ್ದಾರೆ. ಸಸ್ಯ ಮತ್ತು ದವಸ ಧಾನ್ಯಗಳ ದ್ರವ್ಯವು ಆರೋಗ್ಯದ ದೃಷ್ಟಿಯಿಂದ ಅತಿ ಮುಖ್ಯವಾಗಿ ಇಂದಿನ ದಿನಗಳಲ್ಲಿ ಬೇಕು ಎಂದು ಸ್ವಾವಲಂಬಿ ಬದುಕು ನಡೆಸುತ್ತಿರುವ ಮಂಜುನಾಥ್ ರವರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇವರಿಗೆ ಆರೋಗ್ಯ ಕಾಳಜಿ ಇದ್ದು, ಉತ್ತಮ ಆರೋಗ್ಯದ ಬದುಕಿಗೆ ಭದ್ರಬುನಾದಿಯಾಗಿದೆ. ಮನುಷ್ಯನಿಗೆ ದೇವರ ಪೂಜೆ ಎಷ್ಟು ಮುಖ್ಯವೋ ಅದೇ ರೀತಿ ಹಾಗೂ ಆರೋಗ್ಯ ಸುಧಾರಣೆಗಾಗಿ ಉತ್ತಮ ಆಹಾರ ಸೇವನೆಯು ಮುಖ್ಯ ಎನ್ನುತ್ತಾರೆ.

ಜೆ ಪಿ ನಗರದಿಂದ ವಾರಕ್ಕೆ ಎರಡು ಮೂರು ಬಾರಿ ಬರುವ ಶಿಕ್ಷಣ ಇಲಾಖೆ ಯ ಕುದೇರು ಎಸ್ ಪರಶಿವಮೂರ್ತಿ ರವರು ನನಗೆ ಈ ಒಂದು ಸಸ್ಯೋತ್ಪಾದನೆಯ ಜ್ಯೂಸ್ ಸೇವನೆಯಿಂದಾಗಿ ಒಂದು ರೀತಿಯ ಲವಲವಿಕತೆ ಮತ್ತು ಧನಾತ್ಮಕ ಅಂಶವನ್ನು ಸೂಚಿಸುತ್ತಿದೆ. ಮತ್ತು ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡಿದೆ ಎನ್ನುತ್ತಾರೆ.

ಜೆ ಕೆ ಟೈರ್ಸ್ (ವಿಕ್ರಾಂತ್) ನಿವೃತ್ತ ನೌಕರರಾದ ರಮೇಶ್ ರವರು ತಮ್ಮ ಪತ್ನಿ ಭಾನುಮತಿ ಅವರ ಜೊತೆ ದಿನಾಲೂ ಇಲ್ಲಿಗೆ ಹಾಜರಾಗುತ್ತಾರೆ. ಆದರೆ ಇಲ್ಲಿ ಉತ್ತಮ ಗುಣಮಟ್ಟದ ಜ್ಯೂಸ್ ಸಿಗುತ್ತಿದೆ. ಕುಡಿದ ನಂತರ ಏನೋ ಒಂದು ರೀತಿಯಲ್ಲಿ ಹರ್ಷ ನಮ್ಮಲ್ಲಿ ಉಂಟಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಇನ್ನು ಪೋಲಿಸ್ ಇಲಾಖೆಯಲ್ಲಿ ಎಸ್ಪಿ ಯಾಗಿ ನಿವೃತ್ತರಾಗಿರುವ ರಾಚಯ್ಯ ರವರು ಕೂಡ ಈ ಹರ್ಬಲ್ ಜ್ಯೂಸ್ ಅನ್ನ ದಿನಾಲೂ ತೆಗೆದುಕೊಳ್ಳುತ್ತಿದ್ದು ನಾನು ಕುವೆಂಪು ನಗರದಿಂದ ವಾಕ್ ಮಾಡಿಕೊಂಡು ಬರುತ್ತೇನೆ. ಯಾವುದೇ ಲಾಭಾಂಶವನ್ನು ನಿರೀಕ್ಷೆ ಮಾಡದೆ ಇದು ನನ್ನ ದಿನದ ಚಿಂತನೆಯೊಂದಿಗೆ ಉತ್ತಮ ಕೆಲಸ ಎಂದು ಯುವಕ ಅಂಶಗಳನ್ನು ಮೈಗೂಡಿಸಿಕೊಂಡಿದ್ದಾನೆ ಎನ್ನುವುದೇ ಹೆಮ್ಮೆ ಎನ್ನುತ್ತಾರೆ.
ಏಕೆ ಈ ಒಂದು ಹರ್ಬಲ್ ಜ್ಯೂಸನ್ನೇ ಆಯ್ಕೆ ಮಾಡಿಕೊಂಡಿರಿ ಎನ್ನುವ ಪ್ರಶ್ನೆಗೆ ನನ್ನ ಸ್ನೇಹಿತ ಕಾಂತರಾಜು ಈ ಹಿಂದೆ ಒಂದು ಕಡೆ ಸೆಂಟರ್ನಲ್ಲಿ ಇದನ್ನ ತಯಾರಿಸುತ್ತಿದ್ದ ಅಲ್ಲಿಗೆ ನಾನು ಕೂಡ ಹೋಗುತ್ತಿದ್ದೆ. ಅಲ್ಲಿ ಸಿಕ್ಕ ಅನುಭವದ ಜೊತೆಗೆ ಸ್ನೇಹಿತ ಕೆಲಸ ಸಿಕ್ಕಿದ್ದರಿಂದ ಅದನ್ನು ನಿಲ್ಲಿಸಿದ ನಂತರ ನಾನು ಅವನಿಂದ ಸ್ಪೂರ್ತಿ ಪಡೆದು ನಾನೇ ಪ್ರತ್ಯೇಕವಾಗಿ ಈ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ.
ನಾವು ಯಾವುದೇ ಕೆಲಸವನ್ನು ಶ್ರದ್ಧೆಯಿಂದ ದಿನನಿತ್ಯ ಕಾಯಕದಂತೆ ಮಾಡಬೇಕು. ಇದು ಒಂದು ರೀತಿಯಲ್ಲಿ ಯಶಸ್ಸು ಸಿಗುತ್ತದೆ ಎನ್ನುವ ಅಂಶವನ್ನು ಮೈಗೂಡಿಸಿಕೊಂಡಿದ್ದರ ಫಲವಾಗಿ ಈಗ ಸ್ವಲ್ಪ ಆರ್ಥಿಕವಾಗಿ ನಾನು ಸುಧಾರಿಸಿದ್ದೇನೆ ಅನ್ನುತ್ತಾರೆ.
ಇವೆಲ್ಲ ಅಂಶಗಳನ್ನು ನಾವು ಗಮನಿಸಿದಾಗ ಇವರು ಹಲವು ಯುವಕರಿಗೆ ಮಾದರಿಯಾಗಿದ್ದಾರೆ.

ನಾನು ಮೊದಲೇ ಹೇಳಿದಂತೆ ಯಾವುದೇ ರಾಸಾಯನಿಕ ಪದಾರ್ಥವನ್ನು ಮಿಶ್ರಣ ಮಾಡದೆ ನ್ಯಾಚುರಲ್ ಆಗಿ ತಯಾರಿಸುತ್ತಾರೆ. ಬೆಳಿಗ್ಗೆ ಬೇಗ ಎದ್ದು ಹರ್ಬಲ್ ಜ್ಯೂಸ್ ತಯಾರಿಸಲು ಎಲ್ಲ ಪದಾರ್ಥಗಳನ್ನು ರಾತ್ರಿಯೇ ತೆಗೆದುಕೊಂಡು ಬರುತ್ತಾರೆ. ಬೆಳಿಗ್ಗೆ ವಾರದ ಏಳು ದಿನವೂ ಕೂಡ ಲಿಂಗಂಬುಧಿ ಕೆರೆಯ ಮುಂಭಾಗದಲ್ಲಿ ಇವರು ಇರುತ್ತಾರೆ.

ನಾನು ಪ್ರತ್ಯೇಕವಾಗಿ ತರಗತಿಗೆ ಸೇರಿಲ್ಲ ವಾಯು ವಿಹಾರಿಗಳು ಇಲ್ಲಿಗೆ ಬಂದಾಗ ತಮ್ಮ ಸಮಸ್ಯೆಗಳನ್ನು ಹೇಳುತ್ತಾರೆ. ಅದರ ನಿವಾರಣೆಗೆ ತಕ್ಕಂತೆ ತಯಾರಿಸಿರುವ ಜ್ಯೂಸ್ ನೀಡುತ್ತೇನೆ ಎನ್ನುತ್ತಾರೆ. ನಾನು ನೆಟ್ ಮೂಲಕ ನಿರಂತರವಾಗಿ ಈ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು ಯಾವ ಯಾವ ಸಮಸ್ಯೆಗೆ ಯಾವ ಯಾವ ಪ್ರಮಾಣದಲ್ಲಿ ನೀಡಬೇಕು ಎನ್ನುವುದು ಕೂಡ ನನಗೆ ಈಗ ಕರಗತವಾಗಿದೆ ಒಂದು ರೀತಿಯಲ್ಲಿ ದಿನದಿಂದ ದಿನಕ್ಕೆ ನನ್ನ ಅನುಭವವೂ ಕೂಡ ಹೆಚ್ಚುತ್ತಿದೆ ಎನ್ನುತ್ತಾರೆ. ಕನಿಷ್ಠ 15 ರಿಂದ ಒಂದು ತಿಂಗಳು ನಿರಂತರವಾಗಿ ಈ ಹರ್ಬಲ್ ಜ್ಯೂಸ್ ಗಳನ್ನು ಕುಡಿಯುತ್ತಾ ಬಂದರೆ ನಮ್ಮ ಆರೋಗ್ಯದಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸುತ್ತದೆ.
ಪಕ್ಕದಲ್ಲಿಯೇ ನನ್ನ ಸ್ನೇಹಿತ ದಿವೇಂದ್ರ ರವರ ತರಕಾರಿ ಅಂಗಡಿ ಇದ್ದು, ಅಕ್ಕಪಕ್ಕದ ಬಡಾವಣೆಯ ನಿವಾಸಿಗಳು ತರಕಾರಿ ತೆಗೆದುಕೊಂಡು ಹೋಗುವಾಗಲೂ ಕೂಡ ಜ್ಯೂಸ್ ಕುಡಿಯುತ್ತಾರೆ ಎನ್ನುವರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಮ್ಮ ಯುವಜನತೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಆರ್ಥಿಕ ಸೌಲಭ್ಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಒಂದು ಆರೋಗ್ಯ ಪೂರ್ಣ ಉದ್ಯೋಗ ಎನ್ನುವುದು ನನ್ನ ಅನಿಸಿಕೆ. ನಾವು ಬೆಳೆದ ಪ್ರತಿಯೊಂದು ಪದಾರ್ಥಗಳು ಕೂಡ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಏನನ್ನು ಸೇವಿಸಿದರು ಕೂಡ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯು ಕಾಡುತ್ತಿದೆ. ಇವತ್ತಿನ ಪಾಸ್ಟ್ ಫುಡ್, ಜಂಕ್ ಫುಡ್ ಇವುಗಳ ಸೇವನೆಯನ್ನ ಬಾಯಿ ರುಚಿಗಾಗಿ ಯಥೇಚ್ಛವಾಗಿ ಬಳಸುತ್ತಿದ್ದು, ಅದರ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಎಲ್ಲರನ್ನ ಕಾಡುತ್ತಿವೆ. ನಾವು ಸಾವಯವ ಆಹಾರ ಪದಾರ್ಥಗಳನ್ನ ಸೇವನೆ ಮಾಡಬೇಕು. ನಾವು ಕೂಡ ಆರೋಗ್ಯವಾಗಿದ್ದುಕೊಂಡು ನಮ್ಮ ಮಕ್ಕಳಿಗೂ ಕೂಡ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಬೆಳಗ್ಗಿನ ಸಮಯದಲ್ಲಿ ಕಷ್ಟಪಟ್ಟು ಬೆಳಿಗ್ಗೆ ಬೇಗ ಎದ್ದು ಸ್ವಾವಲಂಬಿ ಬದುಕು ನಡೆಸುತ್ತಿರುವ ಮಂಜುನಾಥ್ ರವರು ಇವತ್ತಿನ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗುತ್ತಾರೆ. ಇವರು ಕೇವಲ ಜ್ಯೂಸ್ ನೀಡುವುದರ ಜೊತೆಗೆ ಅದನ್ನ ಹೇಗೆ ತಯಾರು ಮಾಡಬೇಕು ಎನ್ನುವುದರ ಬಗ್ಗೆಯೂ ಕೂಡ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಜೊತೆಗೆ ಯಾವುದೇ ರೀತಿಯಲ್ಲಿ ಬಲವಂತ ವಿಲ್ಲ ತಮ್ಮ ಸಮಸ್ಯೆಗಳಿಗೆ ತಕ್ಕಂತೆ ಈ ರೀತಿಯ ಒಂದು ಹರ್ಬಲ್ ಜ್ಯೂಸ್ಗಳನ್ನ ನಾವು ಪ್ರತಿನಿತ್ಯ ಕುಡಿಯುತ್ತಾ ಬಂದರೆ ನಮ್ಮ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ಇವರ ಆಶಯ. ಇವರ ಒಂದು ಈ ಹರ್ಬಲ್ ಜ್ಯೂಸ್ ನ ಸೆಂಟರ್ ಮತ್ತಷ್ಟು ಯಶಸ್ಸು ಪಡೆಯಲಿ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *