
ಮೈಸೂರು: ಉಪ್ಪಾರ ಸಮಾಜದವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು.

ಅವರು ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಆಯೋಜಿಸಿದ್ದ ಸಂಘದ 30ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಬಡ್ತಿ ಹೊಂದಿದ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯೆ ಇಲ್ಲದೆ ಇದ್ದರೆ ಸಮಾಜದಲ್ಲಿ ಏನನ್ನು ಸಾಧಿಸಲು ಆಗದು. ಸಮಾಜದವರು ತಮ್ಮ ಮಕ್ಕಳುಗಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಈ ನಾಡಿಗೆ ಉತ್ತಮ ಪ್ರಜೆಯನ್ನು ನೀಡಬೇಕು ಎಂದರು.

ಸಮುದಾಯದಲ್ಲಿ ಇದುವರೆಗೂ ಒಬ್ಬರೂ ಕೂಡ ಐಎಎಸ್ ಮಾಡಿರುವ ವ್ಯಕ್ತಿಗಳಿಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಮೂಲಕ ಉನ್ನತ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಮಟ್ಟದ ಅಧಿಕಾರಿಗಳಾಗುವಂತೆ ಮಾಡಬೇಕು ಎಂದರು.

ಸಮಾಜದ ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಆ ಮೂಲಕ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕರೆ ನೀಡಿದರು.

ಸಮಾಜದವರು ಸರ್ವರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಕಟ್ಟುವ ಮೂಲಕ ಸಮಾಜವನ್ನು ಕಟ್ಟುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಸರ್ವರು ಮಾಡಬೇಕು ಎಂದರು.
ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ಹಿಂದುಳಿದ ವರ್ಗಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಅತ್ಯಂತ ಅವಶ್ಯಕವಾಗಿದೆ ಎಂದರು.
ಸಮಾಜದ ವಿದ್ಯಾರ್ಥಿಗಳು ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲವಾಗುವಂತೆ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ರಾಜ್ಯ ಸರ್ಕಾರವು ಉಪ್ಪಾರ ಸಮಾಜದ ಬಗ್ಗೆ ಮಾಡಿರುವ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಹಾಗೂ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿಯನ್ನು ನೀಡಬೇಕೆಂದು, ಸಮುದಾಯದವರಿಗೆ ವಿಧಾನ ಪರಿಷತ್ ನಲ್ಲಿ ಅವಕಾಶ ಮಾಡಿಕೊಡುವುದು ಸೇರಿದಂತೆ ಸಮುದಾಯದ ಹಲವು ಬಹುದಿನಗಳ ಬೇಡಿಕೆಗಳನ್ನು ಸರ್ಕಾರವು ಈಡೇರಿಸಬೇಕೆಂದ ಸ್ವಾಮಿಗಳು ಇದಕ್ಕಾಗಿ ಗುರುಪೀಠ ಹಾಗೂ ಸಮಾಜದ ಸಂಘಟನೆಗಳು ಮಾಡುವ ಕಾರ್ಯಕ್ಕೆ ಸಮಾಜದ ಬಂಧುಗಳು ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಅವರು ಬೆಂಗಳೂರಿನ ಶ್ರೀ ಭಗೀರಥ ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ಗೆ 10 ಲಕ್ಷದ ಒಂದು ಸಾವಿರದ ಒಂದು ರೂಗಳನ್ನು ನೀಡಿ ಟ್ರಸ್ಟಿನ ಮಹಾ ಪ್ರಧಾನ ಪೋಷಕರಾಗುವುದರ ಜೊತೆಗೆ ಪ್ರತಿಭಾವಂತ 11 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕೈ ಗಡಿಯಾರಗಳನ್ನು ಉಡುಗೊರೆಯಾಗಿ ನೀಡಿದರು.
ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರಾಂಕ್ ಪಡೆದ ಜೆ.ಪೂಜಿತಗೆ ಶ್ರೀ ಭಗೀರಥ ವಿದ್ಯಾರತ್ನ ಪ್ರಶಸ್ತಿ ಪ್ರದಾನ ಮಾಡಿ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದಿರುವ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ನಿವೃತ್ತ ಮತ್ತು ಬಡ್ತಿ ಹೊಂದಿದ ನೌಕರರು, ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಯ್ಯನ ಸರಗೂರು ಮಠದ ಶ್ರೀ ಮಹದೇವಸ್ವಾಮಿಗಳು,
ಜಿ.ಎಸ್.ಟಿ ಆಫೀಲು ನ್ಯಾಯಾಧಿಕರಣದ ತಾಂತ್ರಿಕ ಸದಸ್ಯ ಡಿ.ಜಗನ್ನಾಥ್ ಸಾಗರ್, ಸಂಘದ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಾಪುರ ನಾಗರಾಜು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಉದ್ಯಮಿ ಗಂಗಯ್ಯ, ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಸಾಹಿತಿ ಸರಸ್ವತಿ ಚಿಮ್ಮಲಗಿ, ಮುಖಂಡರುಗಳಾದ ಎ.ಟಿ.ಸೋಮಶೇಖರಪ್ಪ, ಕೆ.ಟಿ.ಮೋಹನ್ ಕುಮಾರ್, ಡಾ.ಎಂ.ಗೋವಿಂದರಾಜು, ಕಳಸೇಗೌಡ, ಫಿಲಂಮಹದೇವಶೆಟ್ಟಿ, ಎಂ.ಸೋಮಣ್ಣ, ಲಿಂಗಣ್ಣ, ವಿನೋದ್ ಉಪ್ಪಾರ, ಕನಕನಗರ ಮಹದೇವ, ಜಯಕುಮಾರ್, ಜವರಶೆಟ್ಟಿ, ಹೆಮ್ಮರಗಾಲಸೋಮಣ್ಣ, ಕೆ.ಎಂ.ಶಿವಕುಮಾರಸ್ವಾಮಿ, ನಂಜುಂಡಸ್ವಾಮಿ, ಡಾ.ಅಜಯ್ ಕುಮಾರ್, ಟಿ.ಎನ್.ಶಿವರಾಜ್, ಮಹದೇವ್, ಮಾಗಳಿರಾಮೇಗೌಡ, ಶಿವಣ್ಣ, ಸೋಮಶೇಖರ್, ಮಲ್ಲೇಶ್, ಮಲ್ಲಶೆಟ್ಟಿ, ಸಿದ್ದರಾಜು, ಗೌರಮ್ಮ, ವಿಜಯಲಕ್ಷ್ಮಿ, ಮಮತಾ ಬ್ಯಾನರ್ಜಿ, ಗೀತಾ, ಸೋಮು, ಉಪ್ಪಾರ ಮುಖಂಡರುಗಳಾದ ಬಿ.ಸ್ವಾಮಿ, ಸಿ.ಎಸ್.ನಾಗರಾಜ್, ಮಹದೇವಸ್ವಾಮಿ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.