ಗೃಹ ಆರೋಗ್ಯ ಯೋಜನೆ ಪ್ರಯೋಜನ ಎಲ್ಲರಿಗೂ ತಲುಪಬೇಕು: ಜಿ.ಪಂ. ಸಿ.ಇ.ಒ ಮೋನಾ ರೋತ್

  ಚಾಮರಾಜನಗರ, ಜುಲೈ 18 (ಕರ್ನಾಟಕ ವಾರ್ತೆ):- ಮನೆ-ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುವ ಗೃಹ ಆರೋಗ್ಯ ಯೋಜನೆಯು ಎಲ್ಲರಿಗೂ ಸದುಪಯೋಗವಾಗುವಂತೆ ವೈದ್ಯಾಧಿಕಾರಿಗಳು ಮತ್ತು ತಂಡ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.   

   ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೃಹ ಆರೋಗ್ಯ ಯೋಜನೆ ಕುರಿತ ಕಾರ್ಯಗಾರ ಹಾಗೂ ಯೋಜನೆಯ ವಿಸ್ತರಣೆ ಉದ್ಘಾಟನೆ ಮತ್ತು ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

  ಗೃಹ ಆರೋಗ್ಯ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಕಾಯಿಲೆ ಬರುವ ಮೊದಲೆ ಮುಂಜಾಗ್ರತಾ ಕ್ರಮ ವಹಿಸಿ ತಡೆಯುವಂತಾಗಬೇಕು. ಇಂದು ರಕ್ತದೊತ್ತಡ, ಡಯಾಬಿಟಿಸ್ ನಂತಹ ತೊಂದರೆಗಳು ಜನರಲ್ಲಿ ಸಾಮಾನ್ಯವಾಗಿದೆ. ಆರೋಗ್ಯ ಇಲಾಖೆಯು ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷಿಸುತ್ತಿರುವುದು ಉತ್ತಮವಾದ ಕೆಲಸವಾಗಿದೆ ಎಂದರು.  

  ರೋಗಿಗಳಿಗೆ ಆರೈಕೆಯು ಮುಖ್ಯವಾಗಿದೆ. ಸಾಮಾನ್ಯ ಜನರಿಗೆ ಕಾಯಿಲೆಗಳ ಬಗ್ಗೆ ಅರಿವಿಲ್ಲದೆ ಇರುವುದರಿಂದ ಉಲ್ಬಣವಾದ ನಂತರ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತದೆ. ದಿನನಿತ್ಯ ವ್ಯಾಯಾಮ, ಉತ್ತಮ ಆರೋಗ್ಯ ಶೈಲಿ ಜೀವನ ರೂಪಿಸಿಕೊಳ್ಳುವುದರಿಂದ ಕಾಯಿಲೆಗಳು ಬರದಂತೆ ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.   

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಸ್. ಚಿದಂಬರಂ ಅವರು ಮಾತನಾಡಿ ಗೃಹ ಆರೋಗ್ಯ ಯೋಜನೆಯು ಮಹತ್ತರ ಯೋಜನೆಯಾಗಿದ್ದು ಜಿಲ್ಲೆಯ ಜನರಿಗೆ ತಲುಪಬೇಕು. ಜಿಲ್ಲೆಯಲ್ಲಿ 5 ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಯೋಜನೆ ಅನುಷ್ಠಾನದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಉತ್ತಮ ರೀತಿಯ ಪ್ರಗತಿ ಸಾಧಿಸಲು ಸಿಬ್ಬಂದಿ ವರ್ಗದವರ ಆಸಕ್ತಿ ಮುಖ್ಯವಾಗಿದೆ ಎಂದರು. 

  ಸಮಾಜದ ಪ್ರತಿ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಬದುಕಲು ಗಾಳಿ, ನೀರು, ಆಹಾರ ಇವು ಮೂಲಭೂತವಾಗಿವೆ. ಇಂದು ಪರಿಸರದ ಜೊತೆಗೆ ಸೇವಿಸುವ ಆಹಾರ, ಗಾಳಿ, ವಾತಾವರಣ ಕಲುಷಿತವಾಗುತ್ತಿದ್ದು, ಇದರಿಂದ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ ಎಂದು ತಿಳಿಸಿದರು.

  ಗೃಹ ಆರೋಗ್ಯ ಯೋಜನೆಯಡಿ ಮನೆ ಮನೆಗೆ ತೆರಳಿ ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್, ಡಯಾಬಿಟಿಕ್ ಫುಟ್, ಡಯಾಬಿಟಿಕ್ ರೆಟಿನೋಪತಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರ ಸಂಬಂಧಿ ಸಮಸ್ಯೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಲಿವರ್, ರಕ್ತಹೀನತೆ ಯಂತಹ 14 ಅಸಾಂಕ್ರಾಮಿಕ ರೋಗಗಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದರು.

  ರೋಗಿಗಳು ಹಾಗೂ ಮನೆಯವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಾಯಿಲೆಯ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಮನಪೂರ್ವಕವಾಗಿ ಆರೋಗ್ಯ ಸಿಬ್ಬಂದಿ ಸೇವೆ ಸಲ್ಲಿಸಬೇಕು. ತಂಡಗಳ ಮೂಲಕ ಪ್ರತಿ ಗ್ರಾಮದ ಮನೆ-ಮನೆಗೂ ತೆರಳಿ ಎಲ್ಲರಿಗೂ ಆರೋಗ್ಯ ಚಿಕಿತ್ಸೆ ಮನೆಯಲ್ಲಿಯೇ ಸಿಗುವಂತಾಗಬೇಕು. ಪಂಚ ಗ್ಯಾರಂಟಿ ಯೋಜನೆಗಳಂತೆ ಗರಹ ಆರೋಗ್ಯ ಯೋಜನೆಯು ಜಿಲ್ಲೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರಂ ಅವರು ತಿಳಿಸಿದರು. 

  ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಂದರೇಶ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ರವಿಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *