ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಷ್ಟ್ರಮಟ್ಟದಲ್ಲಿಯೇ ವಿಶೇಷವಾದ ಕಾರ್ಯಕ್ರಮ : ಶಾಸಕ ಎ.ಆರ್. ಕೃಷ್ಣಮೂರ್ತಿ

ಚಾಮರಾಜನಗರ: ಸಮಾಜದ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸದೃಢತೆ ಒದಗಿಸುವ ರಾಜ್ಯಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಷ್ಟ್ರಮಟ್ಟದಲ್ಲಿಯೇ ವಿಶೇಷ ಕಾರ್ಯಕ್ರಮವಾಗಿದೆ ಎಂದು ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.

   ತಾಲೂಕಿನ ಸಂತೇಮರಹಳ್ಳಿ ಗ್ರಾಮದ ಎ.ಪಿ.ಎಂ.ಸಿ. ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮತ್ತು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಬಡವರು, ಮಹಿಳೆಯರ ಸಬಲೀಕರಣಕ್ಕಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಯಶಸ್ವಿಯೂ ಆಗಿದೆ. ಈ ಮಾದರಿಯ ಯೋಜನೆಗಳನ್ನು ದೇಶದ ಯಾವುದೇ ರಾಜ್ಯದಲ್ಲಿ ಜಾರಿಗೊಳಿಸಿರುವುದಿಲ್ಲ ಎಂಬುದು ಗಮನಾರ್ಹವಾಗಿದೆ. 2013-18ರ ಅವಧಿಯಲ್ಲಿ ಜನತೆಗೆ ಭಾಗ್ಯಗಳ ಭಾಗ್ಯ ನೀಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಬಾರಿ ಅಧಿಕಾರಕ್ಕೆ ಬಂದಾಗ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸಿದ್ದಾರೆ. ಇದಕ್ಕಾಗಿ ಬಜೆಟ್‍ನಲ್ಲಿ 56 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ರಾಜ್ಯದ ಸರ್ವಜನರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದರು. 

  ಶಕ್ತಿ ಯೋಜನೆಯಡಿ ಮಹಿಳೆಯರು ಚಾಮರಾಜನಗರದಿಂದ ಬೀದರ್‍ವರೆಗೂ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ಗಳವರೆಗೂ ಉಚಿತವಾಗಿ ವಿದ್ಯುತ್ ಒದಗಿಸಲಾಗುತ್ತಿದೆ. ಹಸಿವು ಮುಕ್ತ ಕರ್ನಾಟಕದ ಉದ್ದೇಶ ಹೊಂದಿರುವ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ 10 ಕೆ.ಜಿ. ಅಕ್ಕಿ ಪ್ರಮಾಣದಲ್ಲಿ 5 ಕೆ.ಜಿ. ಅಕ್ಕಿ ನೀಡಿ ಉಳಿದ 5 ಕೆ.ಜಿ. ಅಕ್ಕಿ ಬದಲಾಗಿ ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ನೀಡುವ ಇಂದಿರಾ ಆಹಾರ ಕಿಟ್ ಜನವರಿ-26ರಿಂದ ಜಾರಿಯಾಗಲಿದೆ. ಯುವನಧಿ ಯೋಜನೆ ರಾಜ್ಯದ ನಿರುದ್ಯೋಗಿಗಳ ಪಾಲಿನ ಆಶಾಕಿರಣವಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಿರುವ ಗೃಹಲಕ್ಷ್ಮೀ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಹೇಳಿದರು.

  ಹೋಬಳಿ ವ್ಯಾಪ್ತಿಯ ಅಭಿವೃದ್ಧಿ ಸಂಬಂಧ ಸಂತೇಮರಹಳ್ಳಿಯಲ್ಲಿ ಎಳನೀರು ಮಾರುಕಟ್ಟೆ ಸ್ಥಾಪನೆಗೆ ನಬಾರ್ಡ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಗೆ 2ನೇ ಹಂತದ ಕೈಗಾರಿಕೆಗಳ ಸ್ಥಾಪನೆಗಾಗಿ ಭೋಗಾಪುರ, ಕುದೇರಿನಲ್ಲಿ ಗಾರ್ಮೆಂಟ್ಸ್ ತೆರೆಯಲು ಕೆ.ಐ.ಡಿ.ಬಿ ಮುಂದಾಗಿದೆ. ಪಾಲಿಟೆಕ್ನಿಕ್ ಕಾಲೇಜು, ಸೋಲಾರ್ ಪ್ಲಾಂಟ್ ನಿರ್ಮಾಣದ ಚಿಂತನೆ ಇದೆ. ಉತ್ತಮ ರಸ್ತೆಗಳು ಹಾಗೂ ನೀರಾವರಿ ಯೋಜನೆಗಳು ಈ ಭಾಗದಲ್ಲಿ ಅನುಷ್ಠಾನಗೊಳ್ಳಲಿವೆ. ಕುದೇರಿನಲ್ಲಿ ರೇಷ್ಮೆ ನೂಲು ಬಿಚ್ಚಣಿಕೆದಾರರ ತರಬೇತಿ ಕೇಂದ್ರ ಪುನಶ್ಛೇತನಗೊಳಿಸಲಾಗುತ್ತದೆ. ಮೆಲ್ಲಹಳ್ಳಿ ಗೇಟ್ ಬಳಿ ಅಗ್ನಿಶಾಮಕ (ಫೈರ್ ಸ್ಟೇಷನ್) ಕೇಂದ್ರ ಆರಂಭವಾಗಲಿದೆ. ಅಲ್ಲದೆ 3 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿವೆ ಎಂದು ಶಾಸಕರಾದ ಕೃಷ್ಣಮೂರ್ತಿ ತಿಳಿಸಿದರು.

  ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಮಾತನಾಡಿ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಯೋಜನೆಗಳಿಂದ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 5 ಸಾವಿರ ರೂ. ಉಳಿತಾಯವಾಗಲಿದೆ. ಬಡವರು ಹಾಗೂ ಮಹಿಳೆಯರು ಆರ್ಥಿಕವಾಗಿ ಸದೃಢಗೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಯೋಜನೆಗಳು ನೆರವಾಗಿವೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಮೊದಲು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿತ್ತು. ಪ್ರಸ್ತುತ ಹೋಬಳಿಮಟ್ಟದಲ್ಲಿ ನಡೆಸುತ್ತಿರುವುದರಿಂದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಗುರಿ ಹೋಂದಲಾಗಿದೆ ಎಂದರು.

  ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಸೋಮೇಶ್ವರ ಅವರು ಮಾತನಾಡಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ಯೋಜನೆಗಳ ಜಾರಿಯಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

  ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಾಯಮಣಿ, ಉಪಾಧ್ಯಕ್ಷರಾದ ಹೇಮಲತಾ, ಕುದೇರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲಮ್ಮ, ಬಾಗಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ಸದಸ್ಯ ಕಾರ್ಯದರ್ಶಿ ಗಿರಿಧರ್, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಸುಕುಮಾರ್, ಚಿನ್ನಸ್ವಾಮಿ, ಆರ್. ರಾಜು, ಭಾಗ್ಯ, ಮಂಜುಳ, ಮಲ್ಲಿಕಾರ್ಜುನ, ಎಂ. ಕುಮಾರ್, ಸಿದ್ದಿಕ್ ಉಲ್ಲಾ, ರಮೇಶ್, ರಾಜೇಶ್, ಕುಮಾರಸ್ವಾಮಿ, ಗಣೇಶ್‍ಕುಮಾರ್, ಜಡೇಯಪ್ಪ, ರಂಗಸ್ವಾಮಿ, ಲಿಂಗಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ಕಾರ್ಯಕ್ರಮದಲ್ಲಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರೊಂದಿಗೆ ಗ್ಯಾರಂಟಿ ಯೋಜನೆಗಳಿಂದಾಗಿರುವ ಅನುಕೂಲಗಳ ಕುರಿತು ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಸಂವಾದ ನಡೆಸಿದರು. ಯೋಜನೆಗಳಿಂದ ಸಾಕಷ್ಟು ಮಹಿಳೆಯರಿಗೆ ಸೌಲಭ್ಯ ದೊರೆತಿರುವುದು ಸಭೆಯಲ್ಲಿ ಕಂಡುಬಂತು. ಗೃಹಲಕ್ಷ್ಮೀ ಯೋಜನೆಯಡಿ ಕೆಲ ಮಹಿಳೆಯರ ಖಾತೆಗೆ ಹಣ ಜಮೆಯಾಗದಿರುವುದು, ಕೆಲವರಿಗೆ ಪಡಿತರ ಚೀಟಿ ದೊರೆಯದಿರುವುದು, ಇತರೆ ಸಮಸ್ಯೆಗಳು ಪ್ರಸ್ತಾಪವಾದವು. ಸಮಸ್ಯೆಗಳನ್ನು ಆಲಿಸಿದ ಶಾಸಕರು ಮುಂದಿನ ಒಂದು ವಾರದೊಳಗೆ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.   

 ಇದೇ ವೇಳೆ ಪಡಿತರ ಚೀಟಿ ವಂಚಿತ ಮಹಿಳೆಗೆ ಸೌಲಭ್ಯವನ್ನು ಸ್ಥಳದಲ್ಲಿಯೇ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ವಿತರಿಸಿದರು.

Leave a Reply

Your email address will not be published. Required fields are marked *