- ಕರ್ನಾಟಕ ಏಕೀಕರಣ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಚಾಮರಾಜನಗರ.: ಭಾರತ, ಕರ್ನಾಟಕ ಸಂಸ್ಕೃತಿ ಎಲ್ಲೂ ಇಲ್ಲ ಆಗಾಗಿ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೈಸೂರು ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಹೇಳಿದರು.
ನಗರದ ವರನಟ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಅಖಿಲ ಭಾರತ ಕನ್ನಡ ಮಹಾಸಭಾದ ವತಿಯಿಂದ ನಡೆದ ಕರ್ನಾಟಕ ಏಕೀಕರಣ ಅಮೃತ ಮಹೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಮಾರು ಜನರು ಕನ್ನಡ ಮಾತನಾಡುತ್ತಾರೆ ಆದರೆ ಅವರ ಮಕ್ಕಳನ್ನು ಇಂಗ್ಲೀಷ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲಿ ಆದರೆ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕನ್ನಡ ಕಾಳಿಸಿ ಬೆಳೆಸಲು ಪ್ರಮುಖವಾಗಿ ಒತ್ತು ನೀಡಬೇಕಿರುವುದು ಬಹಳ ಮುಖ್ಯವಾಗಿದೆ ಎಂದರು.
ಕನ್ನಡ ಹೋರಾಟಗಾರರು ಇಲ್ಲದಿದ್ದರೆ ಕನ್ನಡ ಮುಚ್ಚಿಹೋಗುತಿತ್ತು. ಬೆಂಗಳೂರಿನಲ್ಲಿ 100 ಶೇ. 70 ರಷ್ಟು ಕನ್ನಡ ಮಾತನಾಡುವವರೇ ಇಲ್ಲ. ಶೇ. 25 ರಿಂದ 30 ರಷ್ಟು ಮಾತ್ರ ಕನ್ನಡ ಮಾತಾಡುತ್ತಾರೆ. ಕನ್ನಡ ಹೋರಾಟಗಾರರ ಸಂಖ್ಯೆ ಹೆಚ್ಚಳವಾಗಬೇಕು. ಕನ್ನಡ ಹೋರಾಟಗಾರರಿಗೆ ಎಲ್ಲರೂ ಪ್ರೋತ್ಸಾಹ ಕೊಡಬೇಕು ಆಗ ಮಾತ್ರ ಕನ್ನಡ ಭಾಷೆಗೆ ಒಂದು ಬೆಲೆ, ಗೌರವ ಬರುತ್ತದೆ ಎಂದರು.
ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ ಮಾತನಾಡಿ,ಕನ್ನಡ ಸಂಘಟನೆ ಗಳು ಹೋರಾಟದ ಮೂಲಕ ಸರ್ಕಾರ ವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಏಕೀಕರಣ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಅಖಿಲ ಕರ್ನಾಟಕ ಕನ್ನಡ ಮಹಾಸಭಾ ತಮ್ಮ ಕನ್ನಡ ಸೇವೆಯನ್ನು ಗುರುತಿಸಿ ಪ್ರಶಸ್ತಿ ಕೊಡುವ ಮೂಲಕ ಮತ್ತಷ್ಟು ಕನ್ನಡ ಪರ ಹೋರಾಟ ಮಾಡುವ ಜವಾಬ್ದಾರಿ ಹೆಚ್ಚಿಸಿದೆ. ವಾಟಾಳ್ ನಾಗರಾಜ್ ಕನ್ನಡದ ಅಗ್ರಗಣ್ಯರು.ಕನ್ನಡ ಹೋರಾಟ ಸತ್ಯ, ನ್ಯಾಯ, ಧರ್ಮದ ಹೋರಾಟವಾಗಿದೆ ಎಂದರು.
ಕರ್ನಾಟಕ ಏಕೀಕರಣ ಪ್ರಶಸ್ತಿ ಪ್ರದಾನ: ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎನ್.ನಂಜುಂಡ ಸ್ವಾಮಿ ಮಾತನಾಡಿ, ಚಾಮರಾಜನಗರ ಗಡಿನಾಡು ಜಿಲ್ಲೆಯಾಗಿದ್ದು. ಆವಾಗ ಆವಾಗ ಪೆಟ್ಟು ಬೀಳುತ್ತದೆ. ಕರ್ನಾಟಕದ ಹಿರಿಮೆ-ಗರಿಮೆಯನ್ನು ಸಾರಬೇಕಿದೆ ಎಂದರು.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಮಾತನಾಡಿ,ಕನ್ನಡ ಭಾಷೆ ಎಂದರೆ ಒಂದು ರೋಮಾಂಚನವಾಗಿದೆ ಭಾರತ, ಕರ್ನಾಟಕ ಸಂಸ್ಥತಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಚಾಮರಾಜನಗರ ಜಿಲ್ಲೆಯ ಸಂತರನಾಡು ಇದಾಗಿದೆ.ಮಲೈಮಹದೇಶ್ವರ, ಮಂಟೇಸ್ವಾಮಿ ನೆಲೆಸಿದ ನಾಡು ಇದು ನಾವು ಇಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ ವಾಗಿದೆ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ಕಡಕ್ಕೆ ಧಕ್ಕೆಯಾದರೇ ಮೊಟ್ಟಮೊದಲ ಹೋರಾಟ ಮಾಡುವುದು ಚಾಮರಾಜನಗರದಲ್ಲಿ. ಮಹಾಜನ ವರದಿ ಪ್ರಕಾರ ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ವಾಟಾಳ್ ನಾಗರಾಜ್ ಹೋರಾಟ ಮಾಡಿದರು ಅದರ ಫಲವಾಗಿ ಈ ಭಾಗದಲ್ಲಿ ಕನ್ನಡ ಗಟ್ಟಿಯಾಗಿ ಉಳಿದಿದೆ. ಕನ್ನಡ ನಾಡು, ನುಡಿಗಾಗಿ ನಿರಂತರ ಹೋರಾಟ ಮಾಡಿರುವುದು ನಮ್ಮ ಸಂಘಟನೆಯಾಗಿದೆ ಎಂದರು.
ಕರ್ನಾಟಕ ಏಕೀಕರಣಕ್ಕಾಗಿ ತ್ಯಾಗ ಬಲಿದಾನ ಆಗಿದೆ. ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ದೊಡ್ಡ ಕೊಡುಗೆ ನೀಡಿದ್ದರು. ಕುವೆಂಪುರವರ, ಕೆಂಗಲ್ ಹನುಮಂತಯ್ಯ ದೊಡ್ಡ ಶಕ್ತಿಯಾಗಿದ್ದರು . ಕರ್ನಾಟಕ ಏಕೀಕರಣಕ್ಕೆ ತುಂಬಾ ದೊಡ್ಡ ಇತಿಹಾಸ ಇದೆ. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕ ದೊಡ್ಡ ರಾಜ್ಯವಾಗಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಮಂದಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಮಹದೇವು ಶಂಕನಪುರ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ಯಕ, ಉದ್ಯಮಿ ಶ್ರೀನಿಧಿಕುದರ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು, ಪಣ್ಯದಹುಂಡಿ ರಾಜು, ಆಟೋ ಲಿಂಗರಾಜು, ಶಿವಣ್ಣ, ರಾಚಪ್ಪ, ಸುರೇಶ್ ವಾಜಪೇಯಿ, ಅಣಗಳ್ಳಿ ಬಸವರಾಜು, ಮಹೇಶ್ ಗೌಡ, ಜಿಲ್ಲಾಧ್ಯಕ್ಷ ಮೋಹನ್, ರವಿಚಂದ್ರಪ್ರಸಾದ್, ಚಿನ್ನುಮುತ್ತು, ಹೊಮ್ಮ ಲೋಕೇಶ್, ಶೀಲಾಸತ್ಯೇಂದ್ರಸ್ವಾಮಿ, ಘಟಂಕೃಷ್ಣ, ಅರುಣ್ ಕುಮಾರ್ ಗೌಡ, ಉಮ್ಮತ್ತೂರು ಬಸವರಾಜು, ಕೃಷ್ಣನಾಯಕ, ಶೇಖರ್ ಇತರರು ಹಾಜರಿದ್ದರು.