ರಸ್ತೆಯಲ್ಲಿ ಟೀ ಕುಡಿಯುವ ಮೂಲಕ ವಿನೂತನ ಪ್ರತಿಭಟನೆ

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 159ನೇ ದಿನವಾದ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೀ ಕುಡಿಯುವ ಮೂಲಕ ತಮ್ಮ ಹೋರಾಟವನ್ನು ಮುಂದುವರೆಸಿದರು.

158 ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಇಂದು ಕೂಡಾ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ತಡೆದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದಲ್ಲಿ ಸಂಪೂರ್ಣವಾಗಿ ನೀರು ಖಾಲಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಡಿಯಲು ಒಂದು ತೊಟ್ಟು ನೀರಿಲ್ಲದಂತಹ ಪರಿಸ್ಥಿತಿಗೆ ಬರುತ್ತದೆ. ಇದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೀ ಕುಡಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರಕ್ಕೆ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಈಗಲಾದರೂ ಮಧ್ಯ ಪ್ರವೇಶ ಮಾಡಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಜಾಗೊಳಿಸಬೇಕು. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದರು.

ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗು.ಪುರುಷೋತ್ತಮ್, ಚಾ.ವೆಂ.ರಾಜ್‍ಗೋಪಾಲ್, ಚಾ.ರ.ಕುಮಾರ್, ಪಣ್ಯದಹುಂಡಿ ರಾಜು, ವೀರಭದ್ರ, ಆಟೋ ನಾಗೇಶ್, ಲಿಂಗರಾಜು, ಮಹದೇವಶೆಟ್ಟಿ, ರಾಜಪ್ಪ, ಮಹೇಶ್ ಗೌಡ, ವೀರಭದ್ರ, ನಿಜಧ್ವನಿ ಗೋವಿಂದರಾಜು ಇನ್ನಿತರರಿದ್ದರು.

Leave a Reply

Your email address will not be published. Required fields are marked *