ವಿಕಲಚೇತನರಿಗೆ ಸಾಧನ ಸಲಕರಣೆ ಸೌಲಭ್ಯಕ್ಕಾಗಿ ತಪಾಸಣಾ ಶಿಬಿರ ಆಯೋಜನೆ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಭಾರತ ಸರ್ಕಾರ ಸಾಮ್ಯದ ಬೆಂಗಳೂರಿನ ಅಲಿಮ್ಕೊ ಸಂಸ್ಥೆಯ ನೇತೃತ್ವದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ಒದಗಿಸುವ ಉದ್ದೇಶದಿಂದ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಕಲಚೇತನರಿಗೆ ಸಾಧನ ಸಲಕರಣೆ ಸೌಲಭ್ಯ ವಿತರಿಸುವ ಸಂಬಂಧ ತಪಾಸಣಾ ಶಿಬಿರ ಏರ್ಪಡಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಲಚೇತನರ ತಪಾಸಣೆ ನಡೆಸಿ ಅಗತ್ಯವಿರುವ ಉಪಕರಣಗಳನ್ನು ನೀಡುವ ಸಂಬಂಧ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಪಾಸಣಾ ಶಿಬಿರಗಳನ್ನು ಏರ್ಪಡಿಸಬೇಕಿದೆ. ಈ ಶಿಬಿರದಲ್ಲಿ ವೈದ್ಯ ತಜ್ಞರು, ತಾಂತ್ರಿಕ ಸಿಬ್ಬಂದಿ ಭಾಗವಹಿಸಲಿದ್ದಾರೆ. ಇವರಿಗೆ ನೆರವಾಗಲು ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯ ಕಾರ್ಯಕರ್ತರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ತಪಾಸಣಾ ಶಿಬಿರ ನಡೆಸಿಕೊಡಲು ಆಗಮಿಸಲಿರುವ ತಜ್ಞರು, ತಾಂತ್ರಿಕ ಸಿಬ್ಬಂದಿಗೆ ಅಗತ್ಯವಿರುವ ಪೀಠೋಪಕರಣ, ಕೊಠಡಿಗಳು, ತಪಾಸಣೆಗಾಗಿ ಈ ಹಿಂದೆ ನಿಗದಿಪಡಿಸಲಾಗಿದ್ದ ವಿಶಾಲ ಸ್ಥಳಗಳಲ್ಲಿ ಅವಶ್ಯಕ ಸೌಕರ್ಯಗಳನ್ನು ಒದಗಿಸಬೇಕು. ವಿಕಲಚೇತನರು ಶಿಬಿರದ ಸ್ಥಳಕ್ಕೆ ಬರಲು ಹಾಗೂ ತಪಾಸಣೆಯ ನಂತರ ಮರಳಿ ಊರಿಗೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು 

ಶಿಬಿರಕ್ಕೆ ಬರುವ ವಿಶೇಷಚೇತನರಿಗೆ ಉಪಹಾರ, ಶುದ್ದ ಕುಡಿಯುವ ನೀರು ವ್ಯವಸ್ಥೆಯಾಗಬೇಕು. ಶಿಬಿರಗಳಿಗೆ ವಿಶೇಷಚೇತನರು ತಪ್ಪದೇ ಪಾಲ್ಗೊಳ್ಳಲು ಅನುವಾಗುವಂತೆ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಭೆಯನ್ನು ಮುಂಚಿತವಾಗಿ ಕರೆದು ಫಲಾನುಭವಿಗಳ ಪಟ್ಟಿ ತಯಾರಿಸಬೇಕು. ವಿಕಲಚೇತನರು, ಹಿರಿಯ ನಾಗರಿಕರ ನೊಂದಣಿ ಕಾರ್ಯ ಕೈಗೊಂಡು  ಸಂಬಂಧಪಟ್ಟವರಿಗೆ ಸೂಕ್ತ ಜವಾಬ್ದಾರಿ ನಿರ್ವಹಿಸಲು ತಿಳಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. 

ವಿಕಲಚೇತನರು ಮಾತ್ರವಲ್ಲದೇ 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಶ್ರವಣ ಸಾಧನ, ನಡಿಗೆ ಕೋಲು ಇತ್ಯಾದಿ ಸೌಲಭ್ಯಗಳಿಗೆ ಅವಕಾಶವಿದೆ. ಶ್ರವಣ, ಕಣ್ಣು, ದಂತ, ಇನ್ನಿತರ ತೊಂದರೆಗಳಿರುವ ಹಿರಿಯ ನಾಗರಿಕರು ಕೂಡ ಶಿಬಿರದ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಬೇಕು. ಶಿಬಿರದ ಸಂದರ್ಭದಲ್ಲಿ ಯುಡಿಐಡಿ ಕಾರ್ಡ್ ವಿತರಣೆ, ವಿಕಲಚೇತನರ ಪಿಂಚಣಿ, ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಏರ್ಪಾಡು ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. 

ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಉಪನಿರ್ದೇಶಕರಾದ ಸುರೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೀನಾಕ್ಷಿ, ಅಲಿಮ್ಕೊ ಸಂಸ್ಥೆಯ ಶಿಲ್ಪಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *